ಆಂಧ್ರ ಪ್ರದೇಶ: ಕರ್ನಾಟಕ, ತೆಲಂಗಾಣದಲ್ಲಿ ಗ್ಯಾರಂಟಿಗಳ ಯಶಸ್ಸಿನ ನಂತರ ಆಂಧ್ರ ಪ್ರದೇಶದಲ್ಲೂ ಅದೇ ಗ್ಯಾರಂಟಿ ಸ್ಟ್ರಾಟಜಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಆಂಧ್ರ ಪ್ರದೇಶದಲ್ಲಿ ಪ್ರಚಾರ ಶುರು ಮಾಡಿರುವ ಕಾಂಗ್ರೆಸ್, ಅರ್ಹ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಸಾವಿರ ರೂ. ನೀಡುವುದಾಗಿ ಘೋಷಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಂತಪುರದಲ್ಲಿ ಬಡ ಕುಟುಂಬಗಳಿಗೆ ಹೊಸ ಗ್ಯಾರಂಟಿಯನ್ನು ಘೋಷಿಸಿದರು. ಇದನ್ನು ಕಾಂಗ್ರೆಸ್ ಗ್ಯಾರಂಟಿ ಎಂದು ಅವರು ಕರೆದಿದ್ದಾರೆ. ಕರ್ನಾಟಕದಲ್ಲಿ ಜಾರಿ ಮಾಡಿದ 5 ಗ್ಯಾರಂಟಿ ಹಾಗೂ ತೆಲಂಗಾಣದಲ್ಲಿ ಅನುಷ್ಠಾನಕ್ಕೆ ತಂದಿರುವ 6 ಗ್ಯಾರಂಟಿಗಳಿಗಿಂತ ದೊಡ್ಡ ಗ್ಯಾರಂಟಿ ಎಂದು ಕರೆಯಲಾಗಿದೆ. ಇದು ಗ್ಯಾರಂಟಿ, ಭರವಸೆಯಲ್ಲ. ಭಾರತದ ಯಾವುದೇ ರಾಜ್ಯದಲ್ಲಿರದ ಭರವಸೆಯನ್ನು ಬಡವರಿಗೆ ನಾವು ನೀಡುತ್ತಿದ್ದೇವೆ.
ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ 5,000 ರೂ. ಸಿಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಆಂಧ್ರ ಪ್ರದೇಶದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ತಮ್ಮ ಭಾಷಣದ ನಡುವೆ ಅಲ್ಲಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. ಅನಂತಪುರ ಕರ್ನಾಟಕದ ಗಡಿಯಲ್ಲಿರುವುದರಿಂದ ಕನ್ನಡಿಗರ ಸಂಖ್ಯೆ ಸ್ವಲ್ಪ ಹೆಚ್ಚೇ ಇದೆ. ಅದಕ್ಕಾಗಿ ಖರ್ಗೆ ಕನ್ನಡದಲ್ಲಿ ಮಾತನಾಡಿದರು.
ಆಂಧ್ರ ಪ್ರದೇಶ ಎಂದಾಗಲೆಲ್ಲಾ ಕಾಂಗ್ರೆಸ್ ನಾಯಕರು ಭಾವನಾತ್ಮಕ ವೇದನೆ ಅನುಭವಿಸುತ್ತಾರೆ. ರಾಜ್ಯವು ನಮ್ಮ ಹೃದಯಕ್ಕೆ ಹತ್ತಿರವಾಗಿದೆ ಎಂದು ಖರ್ಗೆ ಹೇಳಿದರು. ಇನ್ನು, ಅನಂತಪುರ ಜಿಲ್ಲೆಯು ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಎನ್ ಸಂಜೀವ್ ರೆಡ್ಡಿ ಅವರನ್ನು ದೇಶಕ್ಕೆ ನೀಡಿದೆ. ಅವಿಭಜಿತ ಆಂಧ್ರ ಪ್ರದೇಶವು ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರನ್ನು ದೇಶಕ್ಕೆ ನೀಡಿದೆ ಎಂದರು.