ಗುವಾಹಟಿ;- ಭಾನುವಾರ ನಡೆದ ಮನ್ ಕಿ ಬಾತ್’ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಮಣಿಪುರದ ಬಗ್ಗೆ ಮಾತನಾಡದಿರುವುದಕ್ಕೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಮಣಿಪುರದ ಪರಿಸ್ಥಿತಿ ಅತ್ಯಂತ ಘೋರವಾಗಿದೆ ಹಾಗೂ ಅತ್ಯಂತ ಕಳವಳಕಾರಿಯಾಗಿದೆ. ಆದರೆ ಆ ಬಗ್ಗೆ ನೀವು ಒಂದೇ ಒಂದು ಮಾತನ್ನೂ ಆಡಿಲ್ಲ. ಒಂದೇ ಒಂದು ಸಭೆಯನ್ನೂ ನಡೆಸಿಲ್ಲ.
ನಿಮ್ಮ ಸರಕಾರವು ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸಿಲ್ಲವೆಂಬಂತೆ ಕಾಣುತ್ತದೆ. ಇದು ಒಪ್ಪತಕ್ಕದ್ದಲ್ಲ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ನಿಮ್ಮ ಸರಕಾರವು ಗಾಢನಿದ್ದೆಯಲ್ಲಿದೆ” ಎಂದವರು ಟೀಕಿಸಿದ್ದಾರೆ.
ರಾಜಧರ್ಮವನ್ನು ಪಾಲಿಸುವಂತೆ ಪ್ರಧಾನಿಯನ್ನು ಕೇಳಿಕೊಂಡಿರುವ ಖರ್ಗೆ, ಶಾಂತಿಯನ್ನು ಕದಡುವವರ ವಿರುದ್ಧ ದೃಢವಾಗಿ ಕಾರ್ಯಾಚರಿಸುವಂತೆ ಸೂಚಿಸಿದ್ದಾರೆ. ಪೌರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿಯನ್ನು ಮರುಸ್ಥಾಪಿಸಬೇಕು ಹಾಗೂ ಸರ್ವಪಕ್ಷ ನಿಯೋಗವು ರಾಜ್ಯವನ್ನು ಸಂದರ್ಶಿಸಲು ಅನುಮತಿ ನೀಡುವಂತೆ ಅವರು ಆಗ್ರಹಿಸಿದ್ದಾರೆ.