ರಾಯಚೂರು: ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಸಿಎಸ್ಆರ್ ಅನುದಾನದಡಿ ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆ ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಜಲನಿರ್ಮಲ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ಕೇಂದ್ರೀಯ ಉಗ್ರಾಣ ನಿಗಮದಿಂದ ಹಮ್ಮಿಕೊಂಡಿದ್ದ ಸಿಎಸ್ಆರ್ ಉಪಕ್ರಮಗಳಡಿಯಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ರಾಯಚೂರಿನ ಅಪೌಷ್ಟಿಕ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆ ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
3.78 ಕೋಟಿ ರೂ. ಅನುದಾನ
ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆ ಕಾರ್ಯಕ್ರಮಕ್ಕೆ 3.78 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ನಾನಾ ಕಾರ್ಯಕ್ರಮಗಳಿಗೆ ಹಲವು ಕಂಪನಿಗಳಿಂದ ಜಿಲ್ಲೆಗೆ ಇಲ್ಲಿಯವರೆಗೂ ಬಿಡುಗಡೆಯಾದ ಅನುದಾನಕ್ಕೆ ಹೋಲಿಸಿದರೆ ಈ ಮೊತ್ತವು ಅತ್ಯಂತ ಹೆಚ್ಚಿನ ಅನುದಾನವಾಗಿದೆ. ಜಿಲ್ಲೆಯ ಸುಮಾರು 300 ಮಕ್ಕಳಲ್ಲಿ ಹೆಚ್ಚಿನ ಅಪೌಷ್ಟಿಕತೆ ಕಂಡುಬಂದಿದ್ದರಿಂದ ಹೆಚ್ಚುವರಿ ಪೌಷ್ಟಿಕಾಂಶ ನೀಡಲಾಗುತ್ತಿದೆ ಎಂದರು. ಕೇಂದ್ರೀಯ ಉಗ್ರಾಣದ ಪ್ರಾದೇಶಿಕ ವ್ಯವಸ್ಥಾಪಕ ವಿಷ್ಣುವರ್ಧನ್ ಮಾತನಾಡಿ, ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹೆಚ್ಚುವರಿಯಾಗಿ ನುಗ್ಗೆ ಸೊಪ್ಪಿನ ಪೌಡರ್ ನೀಡಲಾಗುತ್ತಿದೆ ಎಂದರು.
ಕ್ರಿಯಾ ಯೋಜನೆ ಸಿದ್ಧ
ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮಾತನಾಡಿ, ಅನುದಾನದ ಲಭ್ಯತೆ ಮತ್ತು ಆರ್ಥಿಕ ಸ್ಥಿತಿಗತಿ ಗಣನೆಗೆ ತೆಗೆದುಕೊಂಡು ಜಿಲ್ಲೆಯಲ್ಲಿರುವ ಕೊರತೆ ನೀಗಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಲ್ಲಿ ಮುಖ್ಯವಾಗಿ ಅಪೌಷ್ಟಿಕತೆ ಹೋಗಲಾಡಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು. ಕೇಂದ್ರೀಯ ಉಗ್ರಾಣ ನಿಗಮದಿಂದ ಮಹತ್ವಾಕಾಂಕ್ಷೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆಗಾಗಿ 3.78 ಕೋಟಿ ರೂ. ಚೆಕ್ ಹಸ್ತಾಂತರಿಸಲಾಯಿತು.
ಪ್ರಥಮ ಹಂತದಲ್ಲಿ ಜಿಲ್ಲೆಯ 116 ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಪೂರೈಕೆ ಮಾಡಲಾಗಿದೆ. ಇದರಲ್ಲಿ 100 ಮಕ್ಕಳಲ್ಲಿ ಅಪೌಷ್ಟಿಕತೆ ಸುಧಾರಣೆಯಾಗಿದೆ. ಆದ್ದರಿಂದ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ತಿಳಿಸಿದ್ದಾರೆ.
ಕೇಂದ್ರೀಯ ಉಗ್ರಾಣದ ಪ್ರಾದೇಶಿಕ ವ್ಯವಸ್ಥಾಪಕ ಕೆ.ಕೆ.ಪಂಡಾ, ಪ್ರಧಾನ ವ್ಯವಸ್ಥಾಪಕಿ ಸುನಾಲಿ ಗವಾಯಿ, ಡಿಎಚ್ಒ ಡಾ.ಸುರೇಂದ್ರಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶರಣಮ್ಮ, ಜಿಲ್ಲಾ ಮಹತ್ವಾಕಾಂಕ್ಷೆ ಜಿಲ್ಲೆಯ ಕಾರ್ಯಕ್ರಮಾಧಿಕಾರಿ ಯೂಸೂಫ್ ಅಲಿ ಇದ್ದರು.
ಜಿಲ್ಲೆಯಲ್ಲಿ 40 ಡಿಗ್ರಿ ದಾಟಿದ ತಾಪಮಾನ
ಮಾರ್ಚ್ ಅಂತ್ಯದವರೆಗೆ 35 ರಿಂದ 37 ಡಿಗ್ರಿ ವರೆಗಿದ್ದ ಉಷ್ಣಾಂಶವು ಏಪ್ರಿಲ್ ಎರಡನೇ ವಾರದಲ್ಲಿ 40ಡಿಗ್ರಿ ಗಡಿ ದಾಟಿದೆ. ಬಿಸಿಲ ಧಗೆಯಿಂದ ರಾಯಚೂರು ಜಿಲ್ಲೆಯ ಜನ ತತ್ತರಿಸುವಂತಾಗಿದೆ.
ಸರಕಾರಿ ಕಚೇರಿಗಳು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಿನವಿಡೀ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿ ಪ್ರಯಾಸಪಡುತ್ತಲೇ ಬಿಸಿಲಲ್ಲಿ ಬಸವಳಿಯುವಂತಾಗಿದೆ. ಸಾರ್ವಜನಿಕರಿಗೂ ಬಿಸಿಲ ತಾಪದ ಹೆಚ್ಚಳದ ಬಿಸಿ ತಟ್ಟುತ್ತಿದೆ. ನಗರ ಸೇರಿ ಜಿಲ್ಲಾದ್ಯಂತ ಮಧ್ಯಾಹ್ನ 12 ರಿಂದ 3ರವರೆಗೆ ಜನತೆ ರಸ್ತೆಯಲ್ಲಿ ಸಂಚರಿಸಲೂ ಹಿಂದೇಟು ಹಾಕುತ್ತಿದ್ದಾರೆ.