ಕೋಲ್ಕತ್ತಾ: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಪಂಚಾಯತ್ ಚುನಾವಣೆ ಪ್ರಚಾರ ಮುಗಿಸಿ ಮಮತಾ ಬ್ಯಾನರ್ಜಿ ಅವರು ಬಾಗ್ದೋಗ್ರಾದಿಂದ ಜಲಪೈಗೂರಿಗೆ ಹೆಲಿಕಾಪ್ಟರ್ನಲ್ಲಿ ತೆರಳುತ್ತಿದ್ದರು. ಈ ಭಾಗದಲ್ಲಿ ಭಾರೀ ಮಳೆಯ ಹಿನ್ನಲೆಯಲ್ಲಿ ಉತ್ತರ ಬಂಗಾಳದ ಸಲಗರಾ ಸೇನಾ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ನಿನ್ನೆ ಮಧ್ಯಾಹ್ನ ಎರಡು ಗಂಟೆಗೆ ಈ ಘಟನೆ ನಡೆದಿದೆ. ‘ಹೆಲಿಕಾಪ್ಟರ್ ಲ್ಯಾಂಡ್ ಆಗಬೇಕಿದ್ದ ಭಾಗದಲ್ಲಿ ಭಾರೀ ಮಳೆಯಾಗುತ್ತಿತ್ತು. ಹೀಗಾಗಿ ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದರು’ ಎಂದು ಮೂಲಗಳು ತಿಳಿಸಿವೆ. ಬ್ಯಾನರ್ಜಿ ಅವರು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ಪ್ರಯಾಣಿಸಿ, ನಂತರ ಕೋಲ್ಕತ್ತಾಗೆ ಹಿಂತಿರುಗಿದರು. ಜುಲೈ 8 ರಂದು ಮತದಾನ ನಡೆಯಲಿರುವ ಪಂಚಾಯತ್ ಚುನಾವಣೆಯ ಪ್ರಚಾರಕ್ಕಾಗಿ ಮುಖ್ಯಮಂತ್ರಿಗಳು ಉತ್ತರ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದರು.