ಭೀಕರ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ 19 ವರ್ಷದ ಯುವಕನ ಕಣ್ಣಿನೊಳಗೆ ಬೈಕ್ ನ ಹ್ಯಾಂಡಲ್ ನುಗ್ಗಿದ ಘಟನೆ ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆದಿದೆ.
ಅಪಘಾತ ನಡೆದ ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರ ಸಮಯ ಪ್ರಜ್ಷೆಯಿಂದ ಯುವಕ ಯಾವುದೇ ದೃಷ್ಟಿ ದೋಷದ ಸಮಸ್ಯೆಯಿಲ್ಲದೇ ಚೇತರಿಸಿಕೊಳ್ಳುತ್ತಿದ್ದಾನೆ.
ಯುವಕನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ವೈದ್ಯರು ಯುವಕನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು, ಕಣ್ಣಿನ ಒಳಗೆ ನುಗ್ಗಿದ ಬೈಕ್ನ ಬ್ರೇಕ್ ಹ್ಯಾಂಡಲ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸಿಟಿ ಸ್ಕ್ಯಾನ್ ಮಾಡಲಾಗಿದ್ದು, ಈವೇಳೆ ಕಣ್ಣಿನ ಗುಡ್ಡೆಗಿಂತ ಕೆಲವೇ ಕೆಲವು ಮಿಲಿ ಮೀಟರ್ ಅಂತದಲ್ಲಿ ಬ್ರೇಕ್ ಹ್ಯಾಂಡಲ್ ಸಿಲುಕಿರುವುದು ಕಂಡುಬಂದಿದ್ದು, ಸದ್ಯ ಕಣ್ಣಿನ ಗುಡ್ಡೆಗೆ ಯಾವುದೇ ಹಾನಿಯಾಗಿಲ್ಲ. ಕಣ್ಣುಗುಡ್ಡೆಯ ಕೆಳಗೆ ಭಾಗ ಹಾಗೂ ಮೂಗಿನ ಸುತ್ತಲಿನ ಮೂಳೆಗೆ ಹಾನಿಯಾಗಿದ್ದು, ಮೂಗಿನ ಸುತ್ತಲಿನ ಹಾನಿಗೊಳಗಾದ ಮೂಳೆಯನ್ನು ಎರಡು ಸ್ಕ್ರೂಗಳಿಂದ ಸರಿಪಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೌಲಾಲಂಪುರ್ನಲ್ಲಿರುವ ಯೂನಿವರ್ಸಿಟಿಯ ಕಣ್ಣಿನ ಸಂಶೋಧನಾ ಕೇಂದ್ರದಲ್ಲಿ ಆತನ ಕಣ್ಣಿನ ಒಳಗೆ ನುಗ್ಗಿದ್ದ ಬೈಕ್ನ ಬ್ರೇಕ್ ಹ್ಯಾಂಡಲ್ನ ಸಿಟಿ ಸ್ಕ್ಯಾನ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆಯ ಬಳಿಕ ಯುವಕ ಚೇತರಿಸಿಕೊಳ್ಳುತ್ತಿದ್ದು, ಯುವಕನ ದೃಷ್ಟಿಗೆ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.