ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಯುತ್ತಿದ್ದ ಸ್ಥಳದಲ್ಲಿ ಎಕೆ-47 ರೈಫಲ್ ಹಿಡಿದಿದ್ದ ಮುಸುಕುಧಾರಿಯೊಬ್ಬನನ್ನು ಮಿಲ್ವಾಕೀಯಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಮಾವೇಶದ ಬಳಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಗಳು ವ್ಯಕ್ತಿಯು ಅನುಮಾನಾಸ್ಪದವಾಗಿ ಓಡಾಡುತ್ತಿದ್ದದ್ದನ್ನು ಗಮನಿಸಿ ಬಂಧಿಸಿದ್ದಾರೆ ಎಂದು ತಿಳಿಸಲಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಮೇಲೆ ಕಳೆದ ವಾರ ಕೊಲೆ ಯತ್ನ ನಡೆದಿತ್ತು. ಇದರ ಬೆನ್ನಲ್ಲೇ ಈ ಪ್ರಕರಣ ವರದಿಯಾಗಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಪೆನ್ಸಿಲ್ವೇನಿಯಾದಲ್ಲಿ ಶನಿವಾರ (ಜುಲೈ 13ರ) ಸಂಜೆ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಿದ್ದ ಟ್ರಂಪ್ ಅವರ ಮೇಲೆ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ ಎಂಬಾತ ಗುಂಡು ಹಾರಿಸಿದ್ದ. ಈ ವೇಳೆ ಟ್ರಂಪ್ ಅವರ ಬಲ ಕಿವಿಗೆ ಗಾಯವಾಗಿತ್ತು. ಘಟನೆಯಲ್ಲಿ ಪ್ರೇಕ್ಷಕರೊಬ್ಬರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಸದ್ಯ ಘಟನೆಯಿಂದ ಚೇತರಿಸಿಕೊಂಡಿರುವ ಟ್ರಂಪ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.