ಬಾಲಿವುಡ್ ಸೂಪರ್ ಸ್ಟಾರ್ ನಟ ಈಗಾಗಲೇ ಕೆಲವು ಭೂಗತ ಪಾತಕಿಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಕಳೆದ ಕೆಲವು ದಿನಗಳ ಹಿಂದೆಯಷ್ಟೆ ವ್ಯಕ್ತಿಯೋರ್ವ ಇ-ಮೇಲ್ ಮೂಲಕ ಸಲ್ಲು ಬಾಯ್ ಗೆ ಬೆದರಿಕೆ ಸಂದೇಶ ಕಳಿಸಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ಖಾನ್ರ ಆಪ್ತ ಹಾಗೂ ಮ್ಯಾನೇಜರ್ ಆಗಿರುವ ಪ್ರಶಾಂತ್ ಗುಂಜಲ್ಕರ್ಗೆ ಈ ಬೆದರಿಕೆ ಇ-ಮೇಲ್ ಬಂದಿದೆ. ಈ ಬಗ್ಗೆ ಪ್ರಶಾಂತ್ ಮಾರ್ಚ್ 18 ರಂದು ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಇಮೇಲ್, ರಾಜಸ್ಥಾನದ ಜೋಧಪುರದಿಂದ ಬಂದಿದ್ದು ತಿಳಿದು ರಾಜಸ್ಥಾನಕ್ಕೆ ತೆರಳಿ ಅಲ್ಲಿನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ವ್ಯಕ್ತಿಯೊರ್ವನನ್ನು ಬಂಧಿಸಿದ್ದಾರೆ.
ಸಲ್ಮಾನ್ ಖಾನ್ ಗೆ ಬೆದರಿಕೆ ಇಮೇಲ್ ಕಳುಹಿಸಿದ ಪ್ರಕರಣ ಸಂಬಂಧ 21 ವರ್ಷದ ಧಕದ್ರಾಮ್ ಬಿಷ್ಣೋಯಿ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತ ರಾಜಸ್ಥಾನದ ಜೋದ್ಪುರ್ ಬಳಿಯ ಸಿಯೋಗಿ ಕಿ ಧಾನಿ ಎಂಬಲ್ಲಿನ ನಿವಾಸಿವಾಗಿದ್ದು, ಈತನಿಗೂ ಸಲ್ಮಾನ್ ಖಾನ್ ಹಿಂದೆ ಬಿದ್ದಿರುವ ಬಿಷ್ಣೋಯಿ ಹಾಗೂ ಬ್ರಾರ್ ಗ್ಯಾಂಗ್ಗೂ ಸಂಬಂಧವಿದೆ ಎನ್ನಲಾಗುತ್ತಿದೆ.
ಬಂಧಿತನಾಗಿರುವ ಧಕದ್ರಾಮ್ ಬಿಷ್ಣೋಯಿ ಬಳಿ ಶಸ್ತ್ರಾಸ್ತ್ರಗಳು ಸಹ ಪತ್ತೆಯಾಗಿದ್ದು, ಕೊಲೆ ಬೆದರಿಕೆ ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವನ್ನು ಸಹ ಆತನ ಮೇಲೆ ದಾಖಲಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆತರಲಾಗಿದ್ದು, ಆತ ಇಮೇಲ್ ಕಳಿಸಿದ್ದು ಏಕೆ? ಯಾರ ಸೂಚನೆ ಮೇರೆಗೆ ಇ-ಮೇಲ್ ಕಳಿಸಿದ್ದ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯತ್ನಿಸಿದ್ದನೆ ಎಂದು ವಿಚಾರಣೆ ನಡೆಸಲಾಗುತ್ತಿದೆ.