ಇತ್ತೀಚಿನ ದಿನಗಳಲ್ಲಿ ವೈದ್ಯರು ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತಾರೆ. ಏನೋ ಮಾಡಲು ಹೋಗಿ ಏನೋ ಮಾಡಿ ರೋಗಿಯನ್ನು ಪೇಚಿಗೆ ಸಿಲುಕಿಸಿ ಬಿಡ್ತಾರೆ. ಅಂಥದ್ದೇ ಒಂದು ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.
ಪಿತ್ತಕೋಶದ ಅಪರೇಶನ್ ಗೆ ಅಂತ ಹೋಗಿದ್ದ ವ್ಯಕ್ತಿಗೆ ವೈದ್ಯರು ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದರಿಂದ ವ್ಯಕ್ತಿ ಕಂಗಲಾಗಿದ್ದು ಮುಂದೇನು ಗತಿ ಎನ್ನುವ ಆತಂಕದಲ್ಲಿದ್ದಾನೆ. ಆದರೆ ವೈದ್ಯರು ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ರೂ ಮಕ್ಕಳನ್ನು ಪಡೆಯಬಹುದು ಎಂದು ಸಮಾಧಾನ ಮಾಡಿ ಆತನನ್ನು ಮನೆಗೆ ಕಳುಹಿಸಿದ್ದಾರೆ.
41 ವರ್ಷದ ಜಾರ್ಜ್ ಬಾಸ್ಟೊ ಎಂಬಾತ ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ಅರ್ಜೆಂಟೀನಾದ ಕಾರ್ಡೋಬಾದಲ್ಲಿರುವ ಫ್ಲೋರೆನ್ಸಿಯೊ ಡಯಾಜ್ ಪ್ರಾಂತೀಯ ಆಸ್ಪತ್ರೆಗೆ ದಾಖಲಾಗಿದ್ದ. ಫೆಬ್ರವರಿ 28ರಂದು ಶಸ್ತ್ರಚಿಕಿತ್ಸೆ ಮಾಡೋದಾಗಿ ವೈದ್ಯರು ಹೇಳಿದ್ದರು. ಆದ್ರೆ ಯಾವುದೋ ಕಾರಣಕ್ಕೆ ಅದನ್ನು ಬದಲಿಸಿ 29ಕ್ಕೆ ನಿಗದಿಪಡಿಸಲಾಗಿತ್ತು. ಈ ಬದಲಾವಣೆಯಾ ಆತನನ್ನು ಸಂಕಷ್ಟಕ್ಕೆ ದೂಡಿದೆ.
ಜಾರ್ಜ್ ರೂಮಿಗೆ ಬಂದ ಆಸ್ಪತ್ರೆ ಸಿಬ್ಬಂದಿ ಆತನನ್ನು ಸ್ಟ್ರೆಚ್ಚರ್ ನಲ್ಲಿ ಹಾಕಿಕೊಂಡು ಆಪರೇಷನ್ ರೂಮಿಗೆ ಕರೆದೊಯ್ದಿದ್ದಾರೆ. ಈ ವೇಳೆ ಆಪರೇಷನ್ ಮಾಡುವ ಮೊದಲು ವೈದ್ಯಕೀಯ ರಿಪೋರ್ಟ್ ನೋಡಿಲ್ಲ. ಹಾಗೆಯೇ ವೈದ್ಯರು ಶಸ್ತ್ರಚಿಕಿತ್ಸೆ ಶುರು ಮಾಡಿದ್ದಾರೆ. ವೈದ್ಯರಿಗೆ ಜಾರ್ಜ್ ಆಪರೇಷನ್ ದಿನಾಂಕ ಮುಂದೆ ಹೋಗಿದ್ದು ಗೊತ್ತಿರಲಿಲ್ಲ. ಆ ದಿನ ಯಾವ ಆಪರೇಷನ್ ಇತ್ತೋ ಅದನ್ನೇ ಜಾರ್ಜ್ ಗೆ ಮಾಡಿದ್ದಾರೆ. ಆ ದಿನ ಬೇರೆ ವ್ಯಕ್ತಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗ್ಬೇಕಿತ್ತು. ಅದನ್ನು ಜಾರ್ಜ್ ಗೆ ಮಾಡಲಾಗಿದೆ.
ಆಪರೇಷನ್ ಮುಗಿದ ಮೇಲೂ ಜಾರ್ಜ್ ಗೆ ಏನಾಗಿದೆ ಎಂಬುದು ಗೊತ್ತಾಗಿರಲಿಲ್ಲ. ಅಲ್ಲಿಗೆ ಬಂದ ವೈದ್ಯರು ಪರೀಕ್ಷೆ ಮಾಡಿ, ರಿಪೋರ್ಟ್ ನೋಡಿ ದಂಗಾದ್ರು. ನಿನಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಂತಾನಹರಣ ಆಪರೇಷನ್ ಆಗಿದೆ ಅಂದ್ರು. ಇದನ್ನು ಕೇಳಿದ ಜಾರ್ಜ್ ಗೆ ಭೂಮಿ ಕುಸಿದಂತಾಗಿದೆ. ಏನು ಮಾಡ್ಬೇಕು ಎಂಬುದು ತಿಳಿಯುವ ಮುನ್ನವೇ ಪಿತ್ತಕೋಶದ ಆಪರೇಷನ್ ಗೆ ಆತನನ್ನು ಕರೆದೊಯ್ದಿದ್ದಾರೆ. ಆಪರೇಷನ್ ಮುಗಿಸಿ ಬಂದ ಜಾರ್ಜ್ ವೈದ್ಯರನ್ನು ವಿಚಾರಿಸಿದ್ದಾನೆ. ಆರಂಭದಲ್ಲಿ ಒಬ್ಬರ ಮೇಲೆ ಒಬ್ಬರು ದೂರಿದ ಸಿಬ್ಬಂದಿ ನಂತ್ರ ಜಾರ್ಜ್ ಗೆ ಸಲಹೆ ನೀಡಲು ಶುರು ಮಾಡಿದ್ದಾರೆ. ಇದಕ್ಕೆ ಹೆಚ್ಚು ಚಿಂತಿಸಬೇಕಾಗಿಲ್ಲ. ಮಗು ಅವಶ್ಯವಿದ್ರೆ ಕೃತಕ ಗರ್ಭಧಾರಣೆಯ ಮೂಲಕ ತಂದೆಯಾಗಬಹುದು ಎಂದು ಸಲಹೆ ನೀಡಿದ್ದಾರೆ.
ಆಸ್ಪತ್ರೆ ಈ ನಿರ್ಲಕ್ಷ್ಯ ಜಾರ್ಜ್ ಗೆ ಬೇಸರತರಿಸಿದೆ. ನನ್ನ ರಿಪೋರ್ಟ್ ನ ಎಲ್ಲ ಕಡೆ ಪಿತ್ತಕೋಶ ಎಂದು ಬರೆದಿದೆ. ಇದನ್ನು ತಿಳಿಯಲು ವಿಜ್ಞಾನಿ ಬರಬೇಕಾಗಿರಲಿಲ್ಲ. ಆದ್ರೆ ಯಾರೂ ಅದನ್ನು ನೋಡಿಲ್ಲ. ಆಸ್ಪತ್ರೆಯಲ್ಲಿ ಇನ್ನೂ ಹಗ್ಗಜಗ್ಗಾಟ ನಡೆಯುತ್ತಿದೆ ಎಂದು ಜಾರ್ಜ್ ದೂರಿದ್ದಾರೆ.