ಧಾರವಾಡ: ಜಾತ್ರೆಗಳಂದರೇ ಏನೋ ಒಂಥರ ವಿಶಿಷ್ಟ ಅಚರಣೆಗಳೇ ಇರುತ್ತವೆ. ಒಂದೊಂದು ಜಾತ್ರೆಯಲ್ಲಿ ಒಂದೊಂದು ತೆರನಾದ ಆಚರಣೆ.. ಈ ಆಚರಣೆಗೆ ಅದರದೇ ಆದ ಹಿನ್ನೆಲೆ ಇರುತ್ತೆ…ಇಲ್ಲೊಂದು ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಭಂಡಾರ ತೂರಿ ಹರಕೆ ತೀರಿಸೋದು ನಡೆದು ಬಂದ ಸಂಪ್ರದಾಯ.
ಹೌದು…ತಾಲೂಕಿನ ಮಂಡಿಹಾಳ ಗ್ರಾಮದಲ್ಲಿ ಗ್ರಾಮ ದೇವತೆಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯರ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ. ಮಂಡಿಹಾಳ ಗ್ರಾಮದ ಪ್ರತಿಯೊಂದು ಗ್ರಾಮದಲ್ಲಿ ಗ್ರಾಮ ದೇವಿಯರ ಮೂರ್ತಿ ಮೆರವಣಿಗೆ ನಡೆಯುತ್ತಿದ್ದು, ಗ್ರಾಮಸ್ಥರು ಸಂಭ್ರಮದಿಂದ ಹೊನ್ನಾಟವಾಡುತ್ತಿದ್ದಾರೆ.
ಮಂಡಿಹಾಳ ಗ್ರಾಮದಲ್ಲಿ ಗ್ರಾಮ ದೇವಿಯರ ಜಾತ್ರೆ ನಡೆಯುತ್ತಿರುವುದರಿಂದ ಯಾರೂ ಕೂಡ ಚಪ್ಪಲಿ ಹಾಕಿಕೊಂಡು ಬರದಂತೆ ನಿರ್ಬಂಧ ಹೇರಲಾಗಿದೆ. ಇದರಿಂದ ಯಾರೂ ಕೂಡ ಪಾದರಕ್ಷೆ ಧರಿಸದೇ ಅದ್ಧೂರಿಯಿಂದ ಗ್ರಾಮ ದೇವಿಯರ ಜಾತ್ರೆ ನಡೆಸುತ್ತಿದ್ದಾರೆ.
ದೇವರ ಪಲ್ಲಕ್ಕಿಯ ಮೇಲೆ ಜನರು ಭಂಡಾರ ತೂರುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಕೆಲವರು ಭಂಡಾರ ಹಾರಿಸಿ ವರವ ಕೊಡು ದೇವರೇ ಎಂದು ತಮ್ಮ ನಿವೇದನೆಯನ್ನು ದೇವರ ಮುಂದೆ ಇಟ್ಟರೆ, ಇನ್ನು ಕೆಲವರು ಬೇಡಿಕೆ ಈಡೇರಿದ ಮೇಲೆ ಹರಕೆ ತೀರಿಸುವ ಡಿಮ್ಯಾಂಡ್ ದೇವರ ಮುಂದಿಟ್ಟಿದ್ದಾರೆ.
ಇದೊಂದು ಜಾತ್ರೆಯಲ್ಲಿ ಅಷ್ಟೇ ಅಲ್ಲ, ಸವದತ್ತಿಯ ಯಲ್ಲಮ್ಮ, ಯಲ್ಪಾರಟ್ಟಿಯ ಅರಣ್ಯ ಸಿದ್ದೇಶ್ವರ, ನವಲಿಹಾಳದ ಬೀರೇಶ್ವರ ಸೇರಿದಂತೆ ನೂರಾರು ಕಡೆಗೆ ಈ ಭಾಗದಲ್ಲಿ ದೇವರ ಪಲ್ಲಕ್ಕಿಯ ಮೇಲೆ ಭಂಡಾರವನ್ನು ತೂರುವುದು ಸಂಪ್ರದಾಯವಾಗಿದೆ.ಎಲ್ಲೆಡೆಯೂ ಎಲ್ಲೆಲ್ಲೂ ಎಲ್ಲೋ ಎಲ್ಲೋ. ಹಳದಿ..ಹಳದಿಯಾಗಿರುವುದನ್ನು ನೋಡಿದರೇ ನೋಡುತ್ತಲೇ ನಿಲ್ಲಬೇಕು ಎಂದು ಅನ್ನಿಸುವಂತಹ ವಾತಾವರಣ. ಹಳದಿ ಬಣ್ಣದಲ್ಲಿ ಹಲವು ಚಿತ್ತಾರಗಳು ಮೂಡಿ ನೆರೆದವರನ್ನು ಮೋಡಿ ಮಾಡಿದ್ದಂತೂ ಸುಳ್ಳಲ್ಲ.