ಮಂಡ್ಯ :- ಮೈ- ಬೆಂ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಅಂದಾಜು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಐದಾರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಂಡ್ಯದ ಸಾಂಜೋ ಆಸ್ಪತ್ರೆ ಮುಂಭಾಗ ಸೋಮವಾರ ಜರುಗಿದೆ.
ತುಮಕೂರಿನಿಂದ – ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ದಶಪಥ ಹೆದ್ದಾರಿಯಿಂದ ಮಂಡ್ಯ ನಗರಕ್ಕೆ ತೆರಳಲು ಸರ್ವಿಸ್ ರಸ್ತೆಗೆ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯಲ್ಲಿದ್ದ ಕ್ಯಾಂಟರ್ ಗೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದ್ದು, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಗಾಯಗೊಂಡಿದ್ದಾರೆ.
ಬಸ್ ನಲ್ಲಿದ್ದ ಹಲವರಿಗೆ ಗಂಭೀರ ಗಾಯವಾಗಿದ್ದು, ಪಲ್ಟಿಯಾದ ಬಸ್ ನಲ್ಲಿದ್ದವರನ್ನು ಗಾಯಾಳುಗಳನ್ನು ಸ್ಥಳೀಯರು ಹಾಗೂ ವಾಹನ ಸವಾರರು ಹೊರ ತೆಗೆದು ಹತ್ತಿರವೇ ಇದ್ದ ಸಾಂಜೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಕ್ಷಣವೇ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಪೋಲೀಸರು ಆಗಮಿಸಿ ಪಲ್ಟಿಯಾಗಿದ್ದ ಬಸ್ ಅನ್ನು ಕ್ರೇನ್ ಮೂಲಕ ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.