ನವದೆಹಲಿ: ಮಂಡ್ಯದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಕಾಯಂ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಿಳಿಸಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಮನವಿಗೆ ತಕ್ಷಣ ಸ್ಪಂದಿಸಿರುವ ಅವರು ಈ ಭರವಸೆ ನೀಡಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದ ಹೆಚ್ಡಿಕೆ, ಬಹಳ ದಿನಗಳಿಂದ ಕಾಯಂ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗುತ್ತಿದೆ ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿರುವ ಧರ್ಮೇಂದ್ರ ಅವರು ಆದಷ್ಟು ಶೀಘ್ರವೇ ಕಾಯಂ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಡ್ಯ ಕೇಂದ್ರೀಯ ವಿದ್ಯಾಲಯದಲ್ಲಿ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣದ ಬಗ್ಗೆಯೂ ಅವರು ಭರವಸೆ ನೀಡಿದ್ದಾರೆ. ಕಾಲಮಿತಿಯೊಳಗೆ ನಿರ್ಮಾಣ ಕಾಮಗಾರಿಗಳನ್ನು ಪೂರೈಸಿ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.