ಬಳ್ಳಾರಿ: ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಟಿ.ರಾಮಕ್ಕ ಎಂಬ ಮಂಗಳಮುಖಿ ಕಣದಲ್ಲಿ ಇದ್ದಾರೆ. ಪಟ್ಟಣದ ಪುರಸಭೆಯಲ್ಲಿನ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ದೇಶಪ್ರೇಮ ಪಾರ್ಟಿಯ ಅಭ್ಯರ್ಥಿಯಾಗಿ ಮಂಗಳಮುಖಿ ಟಿ.ರಾಮಕ್ಕ ಚುನಾವಣಾ ಅಧಿಕಾರಿ ಡಾ.ನಯನಾಗೆ ನಾಮ ಪತ್ರ ಸಲ್ಲಿಸಿದ್ದರು.
ರಾಮಕ್ಕ ಮಾತನಾಡಿ, ಸಮಾಜದಲ್ಲಿ ಮಂಗಳಮುಖಿಯರಿಗೆ ಸೂಕ್ತ ಸಮಾನತೆ ಸಿಗುತ್ತಿಲ್ಲ. ಸಮಾಜದಲ್ಲಿ ಗೌರವ ನೀಡುತ್ತಿಲ್ಲ. ಇದರಿಂದಾಗಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುವಂತಹ ದುಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ ಮನನೊಂದು ಶಾಸಕಿಯಾಗುವ ಕನಸಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವೆ ಎಂದು ತಿಳಿಸಿದ್ದಾರೆ.
ನಾನು ಶಾಸಕಿಯಾದಲ್ಲಿ ಕ್ಷೇತ್ರದಲ್ಲಿನ ಸರ್ವರಿಗೂ ಸಮಾನತೆಯನ್ನು ನೀಡಿ ಬಡವರು, ನಿರ್ಗತಿಕರು, ಹಿಂದುಳಿದವರ ಏಳಿಗೆಗೆ ಶ್ರಮಿಸುತ್ತೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ. ನನಗೆ ಮತ ನೀಡಿ ಗೆಲ್ಲಿಸಿ ಎಂದು ಕಣ್ಣೀರಿಡುತ್ತ ಮಾತನಾಡಿದ್ದಾರೆ.
ದೇಶಪ್ರೇಮ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷ ಎಸ್.ಷಣ್ಮುಖಪ್ಪ ಮಾತನಾಡಿ, ಲಾಲ್ ಬಹದ್ದೂರು ಶಾಸ್ತ್ರೀಯವರ ದೇಶ ಕಟ್ಟುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಪಕ್ಷ ಕಾರ್ಯ ನಿರ್ವಹಿಸಲಿದೆ. ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರುವಂತಹ ಉದ್ದೇಶದಿಂದಾಗಿ ಟಿ.ರಾಮಕ್ಕ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ. ದೇಶದ ಬೆನ್ನೆಲುಬಾದ ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಬೆಳೆ ತೆಗೆಯಲು ನವೀನ ತಂತ್ರಜ್ಞಾನದ ಬಳಕೆ, ರೈತರ ಸಾಲಕ್ಕೆ ಬಡ್ಡಿ ವಿನಾಯ್ತಿ, ಬಡತನ ನಿರ್ಮೂಲನೆಗೆ ಕಾರ್ಯತಂತ್ರ, ಸಕಲರಿಗೆ ಶಿಕ್ಷಣ ಸೌಲಭ್ಯ ಮತ್ತು ಪ್ರೋತ್ಸಾಹ, ಸರ್ವರಿಗೂ ಉಚಿತ ಆರೋಗ್ಯ ಸೇವೆ, ಬಹು ಉದ್ಯೋಗ ಸೃಷ್ಠಿ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಬದ್ಧತೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ನಮ್ಮ ಪಕ್ಷದ ಮೂಲ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ.