ನವದೆಹಲಿ: ತ್ರಿಪುರಾ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಆಡಳಿತಾರೂಢ ಬಿಜೆಪಿ ಫೆಬ್ರವರಿ 16 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಎರಡನೇ ಬಾರಿಗೆ ಸಿಎಂ ಗದ್ದುಗೆಗೇರಿದರು.
ಮಾಣಿಕ್ ಸಹಾ ಅವರೊಂದಿಗೆ ಎಂಟು ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಗರ್ತಲಾದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಭಾಗವಹಿಸಿದ್ದರು. ಅವರ ಜೊತೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಮತ್ತು ಹಿಮಂತ್ ಬಿಸ್ವಾ ಶರ್ಮಾ ಕೂಡ ಇದ್ದರು. ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡ, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಸಿಕ್ಕಿಂ ಮುಖ್ಯಮಂತ್ರಿ ಪಿಎಸ್ ತಮಾಂಗ್ ಕೂಡ ಉಪಸ್ಥಿತರಿದ್ದರು.
ಈ ಬಾರಿ ಹಿಂದಿನ ಸರ್ಕಾರದಲ್ಲಿದ್ದ ನಾಲ್ವರು ಸಚಿವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ. ಅವರೆಂದರೆ ರತನ್ ಲಾಲ್ ನಾಥ್, ಪ್ರಣಜಿತ್ ಸಿಂಗ್ ರಾಯ್, ಶಾಂತಾ ಚಕ್ಮಾ ಮತ್ತು ಸುಶಾಂತ ಚೌಧರಿ. ಮೂವರು ಹೊಸ ಮಂತ್ರಿಗಳಾಗಿ ಬಿಪ್ಲಬ್ ದೇಬ್ ಅವರ ನಿಕಟವರ್ತಿ ಟಿಂಕು ರಾಯ್, ಬಿಜೆಪಿಯ ಪರಿಶಿಷ್ಟ ಪಂಗಡಗಳ ಮೋರ್ಚಾದ ಮುಖ್ಯಸ್ಥ ಬಿಕಾಶ್ ದೆಬ್ಬರ್ಮಾ ಮತ್ತು ಸುಧಾಂಶು ದಾಸ್ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಈ ಚುನಾವಣೆಯಲ್ಲಿ ಸೋತಿದ್ದು, ಒಂದು ಸಚಿವ ಸ್ಥಾನವನ್ನು ಪಡೆದುಕೊಂಡಿದೆ. ಐಪಿಎಫ್‌ಟಿಯಿಂದ ಸುಕ್ಲಾ ಚರಣ್ ನೋಟಿಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಬಾರಿಯ ಚುನಾವಣೆಯಲ್ಲಿ 13 ಸ್ಥಾನಗಳನ್ನು ಗೆದ್ದಿರುವ ತಿಪ್ರಾ ಮೋತಾಗೆ ಮತ್ತೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಆಡಳಿತ ಪಕ್ಷ ಮೂರು ಸಚಿವ ಸ್ಥಾನಗಳನ್ನು ಮೀಸಲಿಟ್ಟಿದೆ ಎಂದು ಮೂಲಗಳು ತಿಳಿಸಿವೆ.ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಪ್ರತಿಭಟಿಸಲು ಪ್ರತಿಪಕ್ಷ ಸಿಪಿಎಂ ಮತ್ತು ಕಾಂಗ್ರೆಸ್ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿವೆ.