ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಮನ್ ಕೀ ಬಾತ್ (Mann Ki Baat) ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುತ್ತದೆ. ಈ ಜನಪ್ರಿಯ ರೆಡಿಯೋ ಕಾರ್ಯಕ್ರಮ 99 ಸಂಚಿಕೆಗಳನ್ನು ಪೂರೈಸಿದ್ದು, ಇದೀಗ 100ನೇ ಸಂಚಿಕೆಗೆ ಕಾಲಿಟ್ಟಿದೆ. ಇಂದು (ಏ.30) ಬೆಳಿಗ್ಗೆ 11 ಗಂಟೆಗೆ 100ನೇ ಮನ್ ಕೀ ಬಾತ್ (Mann Ki Baat @100) ಪ್ರಸಾರವಾಗಲಿದೆ. ಪ್ರಧಾನಿ ಮೋದಿಯವರ ಮನದ ಮಾತನ್ನು ಕೇಳಲು ದೇಶ-ವಿದೇಶದ ಜನರು ಕಾತುರರಾಗಿದ್ದಾರೆ.
ಈ ಮನ್ ಕೀ ಬಾತ್ ಕಾರ್ಯಕ್ರಮವನ್ನು ದೇಶದ 100 ಕೋಟಿಗೂ ಹೆಚ್ಚು ಮಂದಿ ಕೇಳಿದ್ದಾರೆ ಎಂದು ರೋಹ್ಟಕ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಸಮೀಕ್ಷಾ ವರದಿ ಹೇಳಿದೆ. ದೇಶದ ಜನರಿಗೆ ನೈಜ ಭಾರತವನ್ನು ಪರಿಚಯಿಸುವಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಶೇ 75ರಷ್ಟು ಮಾಧ್ಯಮ ಪ್ರತಿನಿಧಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದುಭಾರತೀಯ ಸಮೂಹ ಸಂವಹನ ಸಂಸ್ಥೆ (ಐಐಎಂಸಿ) ನಡೆಸಿದ ವಿಶೇಷ ಅಧ್ಯಯನದಲ್ಲಿ ಬಹಿರಂಗವಾಗಿದೆ.
ವಿದೇಶಗಳಲ್ಲೂ ಜನಪ್ರಿಯ
ಮನ್ ಕೀ ಬಾತ್ ವಿದೇಶಗಳಲ್ಲೂ ಜನಪ್ರಿಯವಾದ ಕಾರ್ಯಕ್ರಮವಾಗಿದೆ. 11 ವಿದೇಶಿ ಭಾಷೆಗಳಲ್ಲಿ ಭಾಷಣ ಪ್ರಸಾರವಾಗುತ್ತಿರುವುದು ಅದರ ಜನಮೆಚ್ಚುಗೆಗೆ ಸಕ್ಷಿಯಾಗಿದೆ. ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಸ್ತು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ ಇಂಗ್ಲಿಷ್ ಹೊರತುಪಡಿಸಿ 22 ಭಾರತೀಯ ಭಾಷೆಗಳು, 29 ಉಪಭಾಷೆಗಳು ಮತ್ತು 11 ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿದೆ.
ಮನ್ ಕೀ ಬಾತ್ ಜನರ ಮೇಲೆ ಎಷ್ಟು ಪ್ರಭಾವ ಬೀರಿದೆ
ಸುಮಾರು ಶೇ 60 ಜನರು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರೆ. ಶೇ 55 ರಷ್ಟು ಜನರು ಜವಾಬ್ದಾರಿಯುತ ನಾಗರಿಕರಾಗುತ್ತೇವೆ ಎಂದಿದ್ದಾರೆ. ಶೇ 63 ರಷ್ಟು ಜನರು ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇ 59 ಜನರು ಸರ್ಕಾರದ ಮೇಲಿನ ತಮ್ಮ ನಂಬಿಕೆ ಹೆಚ್ಚಿದೆ ಎಂದು ಹೇಳಿದ್ದಾರೆ. ಶೇ 58 ರಷ್ಟು ಜನರು ತಮ್ಮ ಜೀವನ ಪರಿಸ್ಥಿತಿ ಸುಧಾರಿಸಿದೆ. ಮತ್ತು ಶೇ 73 ರಷ್ಟು ಜನರು ಸರ್ಕಾರದ ಕೆಲಸ ಮತ್ತು ದೇಶದ ಪ್ರಗತಿಯ ಬಗ್ಗೆ ಆಶಾವಾದವನ್ನು ಹೊಂದಿದ್ದಾರೆ. ಶೇ 17.6 ರಷ್ಟು ಜನರು ರೇಡಿಯೊದಲ್ಲಿ, ಶೇ 44.70 ರಷ್ಟು ಜನರು ಟಿವಿಯಲ್ಲಿ ಮತ್ತು ಶೇ 37.6 ರಷ್ಟು ಜನರು ಮೊಬೈಲ್ ಸಾಧನಗಳಲ್ಲಿ ಕಾರ್ಯಕ್ರಮವನ್ನು ಕೇಳುತ್ತಾರೆ ಅಥವಾ ನೋಡುತ್ತಾರೆ ಎಂದು ಅಧ್ಯಯನ ಹೇಳಿದೆ.