ಮಂಡ್ಯ: ಕೋರಂ ಕೊರತೆಯಿಂದಾಗಿ ಮುಂದೂಡಲ್ಪಟ್ಟಿದ್ದ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ(ಮನ್ಮುಲ್) ಅಧ್ಯಕ್ಷ ಸ್ಥಾನದ ಚುನಾವಣೆಗೆ ಮತ್ತೆ ಜುಲೈ 24ರಂದು ಮುಹೂರ್ತ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್ ನಡುವೆ ತೀವ್ರ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿರುವುದರಿಂದ ಚುನಾವಣೆಯ ತೀವ್ರ ಕುತೂಹಲ ಮೂಡಿಸಿದೆ.
ಈ ಹಿಂದೆ ಜುಲೈ 6ರಂದು ಚುನಾವಣೆ ನಿಗದಿಯಾಗಿತ್ತು. ಆದರೆ, ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕ ಡಾಲು ರವಿ ಹೊರತಾಗಿ ಉಳಿದ್ಯಾವ ನಿರ್ದೇಶಕರು ಭಾಗವಹಿಸಿರಲಿಲ್ಲ. ನಾಮಪತ್ರ ಸಲ್ಲಿಸಿದ ಆಕಾಂಕ್ಷಿತರೂ ಕೂಡ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಹೀಗಾಗಿ ಕೋರಂ ಕೊರತೆಯಿಂದಾಗಿ ಚುನಾವಣಾಧಿಕಾರಿಯೂ ಆದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು ಮುಂದೂಡಿದ್ದರು.
ಜುಲೈ 6ರಂದು ನಡೆಯಬೇಕಿದ್ದ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಇಬ್ಬರು ನಿರ್ದೇಶಕರಿಗೆ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ನಿರ್ಬಂಧ ಹೇರಿತ್ತು. ತನಗೆ ಅಧಿಕಾರ ಕೈತಪ್ಪುವ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು, ಚುನಾವಣೆಗೆ ಮುನ್ನ ರಾಜಕೀಯ ಅಧಿಕಾರ ಬಳಸಿ ನಿರ್ದೇಶಕರಿಗೆ ನಿರ್ಬಂಧ ಹೇರುವ ಪ್ರಯತ್ನವನ್ನು ಪರೋಕ್ಷವಾಗಿ ಮಾಡಿತ್ತು.
ಎರಡು ವರ್ಷಗಳ ಹಿಂದೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯಲ್ಲಿ ಇದೇ ರೀತಿಯ ರಾಜಕೀಯ ತಂತ್ರಗಾರಿಕೆಯನ್ನು ಪ್ರದರ್ಶಿಸಿದ್ದ ಜೆಡಿಎಸ್, ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಎಚ್.ಎಸ್.ನರಸಿಂಹಯ್ಯ ಅವರ ಮತಹಕ್ಕನ್ನು ಕಾನೂನು/ಕೋರ್ಟ್ ಹೆಸರಿನಲ್ಲಿ ಕಸಿದುಕೊಂಡಿತ್ತು. ಈ ಮೂಲಕ ತೆರೆಮೆರೆಯ ರಾಜಕೀಯ ಮಾಡಿತ್ತು. ಇದೀಗ ಕಾಂಗ್ರೆಸ್ ಕೂಡ ಮನ್ಮುಲ್ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ತಂತ್ರಗಾರಿಕೆಯನ್ನೇ ಪ್ರದರ್ಶಿಸಿ, ಇಬ್ಬರು ನಿರ್ದೇಶಕರ ಮತಹಕ್ಕನ್ನು ಕಸಿದುಕೊಂಡು ಸೇಡು ತೀರಿಸಿಕೊಂಡಿತ್ತು.
ಸಭೆಗೆ ಗೈರು
ಮನ್ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರ, ವಿ.ಎಂ.ವಿಶ್ವನಾಥ್ ಅವರನ್ನು ಮನ್ಮುಲ್ ಅಧ್ಯಕ್ಷರ ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳದಂತೆ ಚುನಾವಣೆ ದಿನವೇ ಮಂಡ್ಯ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಸೂಚನೆ ನೀಡಿತ್ತು. ಹೀಗಾಗಿ ಜೆಡಿಎಸ್, ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಪರಿಣಾಮ ಕಡಿಮೆ ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, ಮತ ಹಕ್ಕು ಹೊಂದಿದ್ದ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.
ಪರಿಣಾಮ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿದ್ದ ಚುನಾವಣೆಯು ಜುಲೈ 24ರಂದು ನಿಗದಿಯಾಗಿದೆ. ಜುಲೈ 6ರಂದು ನಾಮಪತ್ರಗಳ ಹಿಂತೆಗೆಯುವಿಕೆ ಹಂತದಲ್ಲೇ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ಆ ಹಂತದಲ್ಲೇ ಜುಲೈ 24ರಂದು ಪುನಾರಂಭಗೊಳ್ಳಲಿದೆ. ಉಮೇದುವಾರಿಕೆ ಹಿಂಪಡೆಯುವಿಕೆ ಬಳಿಕ, ನಾಮಪತ್ರಗಳ ಪರಿಶೀಲನೆ, ಮತದಾನ ನಡೆಯಲಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)