ಹೈದರಾಬಾದ್: ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಟಿವಿ ಆಂಕರ್ ಅನ್ನು ಉದ್ಯಮಿ ಯುವತಿಯೊಬ್ಬಳು ಅಪಹರಿಸಿ ಇದೀಗ ಪೊಲೀಸರ ಅತಿಥಿಯಾಗಿರುವ ಅಚ್ಚರಿಯ ಪ್ರಕರಣವೊಂದು ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಯುವತಿಯನ್ನು ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದ್ದು, ಅವರು ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಭೋಗಿರೆಡ್ಡಿ ತ್ರಿಶಾ ಅವರು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಟಿವಿ ಮ್ಯೂಸಿಕ್ ಚಾನೆಲ್ ಆಂಕರ್ ಪ್ರಣವ್ ಅವರ ಪ್ರೊಫೈಲ್ ಅನ್ನು ನೋಡಿ ಮದುವೆಯ ಪ್ರಸ್ತಾಪ ಇಟ್ಟಿದ್ದರು. ಇದಕ್ಕೆ ಪ್ರಣವ್ ಒಪ್ಪಿಗೆ ಸಿಕ್ಕಿತ್ತು. ಇಬ್ಬರೂ ಚಾಟ್ ಮಾಡಲು ಆರಂಭಿಸಿದ್ದರು. ಆದರೇ, ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಪರಿಚಯವಾದ ಪ್ರಣವ್ ನಿಜವಾದ ವ್ಯಕ್ತಿ ಆಗಿರಲಿಲ್ಲ ಬದಲಿಗೆ ಆತ ಬೇರೆ ಯಾರೋ ವ್ಯಕ್ತಿಯಾಗಿದ್ದನು.
ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಯುವತಿಗೆ ಪರಿಚಯವಾದ ವ್ಯಕ್ತಿ ತನ್ನ ಪ್ರೊಫೈಲ್ ಫೋಟೋ ಬಳಸುವ ಬದಲು ಟಿವಿ ನಿರೂಪಕ ಪ್ರಣವ್ ಫೋಟೋ ಬಳಸಿಕೊಂಡಿದ್ದಾನೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮಹಿಳೆ ನಿಜವಾದ ಪ್ರಣವ್ ಅವರ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ಈ ವಿಚಾರ ಹೇಳಿಕೊಂಡಿದ್ದಾರೆ. ಆದರೆ, ಯುವತಿಯ ಮದುವೆಯ ವಿಚಾರವನ್ನು ಟಿವಿ ನಿರೂಪಕ ತಿರಸ್ಕರಿಸಿದ್ದಾನೆ. ಇದರಿಂದ ಮನನೊಂದ ಯುವತಿ ಪ್ರಣವ್ ನನ್ನು ಅಪಹರಣ ಮಾಡಿದ್ದಾರೆ.