ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಪ್ರಾರಂಭವಾಗಿ ಸುಮಾರು ಐದಾರು ವರ್ಷಗಳೆ ಕಳೆದಿದೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಇನ್ನೇನು ಇನ್ನೆನ್ನೂ ಕೊನೆಗೂ ಸಿನಿಮಾ ಕಣ್ಮುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದು ಕೋರ್ಟ್ ನಲ್ಲಿ ಅವರಿಗೆ ಗೆಲುವು ಸಕ್ಕಿದೆ.
ನಿರ್ದೇಶಕ ಎಪಿ ಅರ್ಜುನ್ ಹಾಗೂ ‘ಮಾರ್ಟಿನ್’ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಮಧ್ಯೆ ಮನಸ್ತಾಪ ಇದೆ ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತಲೇ ಇದೆ. ಆದರೆ, ಇದನ್ನು ತಂಡ ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ತಂಡದವರು ಕೋರ್ಟ್ ಮೆಟ್ಟಿಲನ್ನು ಹತ್ತುತ್ತಲೇ ಇದ್ದಾರೆ. ತಮ್ಮ ಹೆಸರನ್ನು ಮಾರ್ಟಿನ್ ಸಿನಿಮಾ ತಂಡ ಕೈಬಿಟ್ಟಿದೆ ಎಂದು ನಿರ್ದೇಶಕ ಎಪಿ ಅರ್ಜುನ್ ಆರೋಪಿಸಿದ್ದರು. ಈಗ ಅವರ ಪರವಾಗಿ ಕೋರ್ಟ್ ಆದೇಶ ನೀಡಿದೆ. ಪ್ರಚಾರ ದಾಖಲೆಗಳಲ್ಲಿ ಎಪಿ ಅರ್ಜುನ್ ಅವರ ಹೆಸರನ್ನು ಸೇರಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ.
‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಎಪಿ ಅರ್ಜುನ್ ನಡುವೆ ಕಳೆದ ಒಂದೆರಡು ವರ್ಷಗಳಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಲೆ ಇದೆ. ಸಿನಿಮಾದ ಬಜೆಟ್, ಹಣ ದುರ್ಬಳಕೆ ಆರೋಪವನ್ನು ನಿರ್ಮಾಪಕ ಉದಯ್ ಮೆಹ್ತಾ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿನಿಮಾದ ವಿಎಫ್ಎಕ್ಸ್ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆಯ ವಿರುದ್ಧ ವಂಚನೆ ಪ್ರಕರಣವನ್ನು ಉದಯ್ ಮೆಹ್ತಾ ಈಗಾಗಲೇ ದಾಖಲಿಸಿದ್ದಾರೆ. ಉದಯ್ ಮೆಹ್ತಾ ನೀಡಿದ್ದ ದೂರಿನಲ್ಲಿ ಎಪಿ ಅರ್ಜುನ್ ಹೆಸರು ಸಹ ಇತ್ತು.
ವಿವಾದದ ಬಳಿಕ ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮಗಳಲ್ಲಿ ಕಂಡು ಬಂದ ಸಿನಿಮಾ ಪೋಸ್ಟರ್ಗಳಲ್ಲಿ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಅವರ ಹೆಸರು ನಾಪತ್ತೆಯಾಗಿತ್ತು. ನಿರ್ದೇಶಕರ ಹೆಸರು ಬಿಟ್ಟು ಸಿನಿಮಾದ ಪ್ರಚಾರವನ್ನು ನಿರ್ಮಾಪಕ ಉದಯ್ ಮೆಹ್ತಾ ಮಾಡಿದ್ದರು. ಇದೀಗ ಕೋರ್ಟ್ ಮೆಟ್ಟಿಲೇರಿರುವ ಎಪಿ ಅರ್ಜುನ್, ‘ಸಿನಿಮಾದ ನಿರ್ದೇಶಕನಾಗಿದ್ದರೂ ಸಹ ನನ್ನ ಹೆಸರು ಕೈಬಿಟ್ಟು ಪ್ರಚಾರ ಮಾಡಲಾಗುತ್ತಿದೆ. ಸಿನಿಮಾದ ಒಪ್ಪಂದವನ್ನು ನಿರ್ಮಾಪಕರು ಪಾಲಿಸುತ್ತಿಲ್ಲ. ನನ್ನ ಹೆಸರು ಇಲ್ಲದೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು’ ಎಂದು ಅರ್ಜುನ್, ಕೋರ್ಟ್ಗೆ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಹೈಕೋರ್ಟ್ನ ರಜಾಕಾಲದ ವಿಭಾಗೀಯ ನ್ಯಾಯಪೀಠದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಮತ್ತು ಎಂ.ಜಿ.ಉಮಾ ವಿಚಾರಣೆ ನಡೆಸಿ, ಅರ್ಜುನ್ ಪರವಾಗಿ ಆದೇಶ ನೀಡಿದೆ.
‘ಮುಂದೆ ಪ್ರಿಂಟ್ ಮಾಡುವ ದಾಖಲೆಗಳಲ್ಲಿ ಎಪಿ ಅರ್ಜುನ್ ಹೆಸರನ್ನು ಸೇರಿಸಿ. ಪ್ರಮೋಷನ್ನಲ್ಲಿ ಭಾಗಿ ಆಗಲು ಅವಕಾಶ ನೀಡಿ. ಅರ್ಜುನ್ ಅವರು ತಂಡದ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಾರದು’ ಎಂದು ಆದೇಶ ನೀಡಿತು. ಇದೆ ಅಕ್ಟೋಬರ್ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ.