ಲಕ್ನೋ: ಶ್ರೀಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯನ್ನು ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಸಮ್ಮತಿ ನೀಡಿದೆ. ಮಸೀದಿ ಪರಿಶೀಲಿಸಲು ಆಯುಕ್ತರನ್ನು ನೇಮಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪುರಸ್ಕರಿಸಿದ ನ್ಯಾ. ಮಯಾಂಕ್ ಕುಮಾರ್ ಜೈನ್ ಅವರಿದ್ದ ಪೀಠ ಮೂವರು ಅಧಿಕಾರಿಗಳಿರುವ ಆಯೋಗ ರಚಿಸುವಂತೆ ಸೂಚಿಸಿದೆ.
ಶ್ರೀ ಕೃಷ್ಣನ ಜನ್ಮಸ್ಥಳವು ಮಸೀದಿಯ ಕೆಳಗೆ ಇದೆ ಮತ್ತು ಮಸೀದಿಯು ಹಿಂದೂ ದೇವಾಲಯವಾಗಿದೆ ಎಂದು ತೋರಿಸುವ ಹಲವು ಚಿಹ್ನೆಗಳು ಇವೆ. ಹೀಗಾಗಿ ಮಸೀದಿಯನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಹಿಂದೂ ದೇವಾಲಯಗಳ ವಿಶಿಷ್ಟ ಲಕ್ಷಣವಾಗಿರುವ ಕಮಲದ ಆಕಾರದ ಸ್ತಂಭವು ಅಸ್ತಿತ್ವದಲ್ಲಿದೆ. ಕೃಷ್ಣ ಜನಿಸಿದ ರಾತ್ರಿ ಆತನನ್ನು ರಕ್ಷಿಸಿದ ಹಿಂದೂ ದೇವತೆಗಳಲ್ಲಿ ಒಬ್ಬನಾದ ಶೇಷನಾಗನ ಚಿತ್ರವೂ ಇದೆ. ಮಸೀದಿಯ ಕಂಬದ ತಳದಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಕೆತ್ತನೆಗಳು ಸಹ ಗೋಚರಿಸುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.