ಕುಟುಂಬ ಸದಸ್ಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏಕಾಏಕಿ ದುಷ್ಕರ್ಮಿಗಳು 11 ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಬಾಲಕಿ ಮೃತಪಟ್ಟಿದ್ದು 10 ಮಕ್ಕಳ ಸ್ಥಿತಿ ಗಂಭೀರವಾಗಿರುವ ಘಟನೆ ಚಿಕಾಗೊದಲ್ಲಿ ನಡೆದಿದೆ.
ಅರಿಯಾನಾ ಮೊಲಿನಾ (8) ಮೃತಪಟ್ಟ ಬಾಲಕಿ. ಈಕೆಯ ತಲೆಗೆ ಗುಂಡು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗುಂಡಿನ ದಾಳಿಯಲ್ಲಿ 11 ಮಕ್ಕಳ ಪೈಕಿ ನಾಲ್ವರು ಮಕ್ಕಳು, ಒಂದು ವರ್ಷದ ಬಾಲಕ ಮತ್ತು ಎಂಟು ವರ್ಷದ ಬಾಲಕನಿಗೆ ಗುಂಡು ತಗುಲಿದ್ದು ಎಲ್ಲರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ೩೦ ವರ್ಷಗಳಿಂದ ಇದೇ ಬಡಾವಣೆಯಲ್ಲಿ ಜೀವನ ನಡೆಸುತ್ತಿದ್ದೇವೆ. ಯಾವ ಉದ್ದೇಶದಿಂದ ಗುಂಡಿನ ದಾಳಿ ನಡೆಸಿದ್ದಾರೆಂದು ಗೊತ್ತಿಲ್ಲ. ಆದರೆ ನನ್ನ ಮಗಳು ಮೃತಪಟ್ಟಿರುವುದು ಇನ್ನೂ ನನ್ನ ಹೆಂಡತಿಗೆ ಗೊತ್ತಿಲ್ಲ ಎಂದು ಬಾಲಕಿಯ ತಂದೆ ಪ್ರತಿಕ್ರಿಯಿಸಿದ್ದಾರೆ.
ಪೊಲೀಸರು ಗುಂಡು ಹಾರಿಸಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಈ ಗುಂಡಿನ ದಾಳಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.