ಬೆಂಗಳೂರು: ಬೆಂಗಳೂರಿನ ಸಿಟಿ ಮಾರ್ಕೆಟ್ನ(City Market) ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಹಾರಕ್ಕೆ (Flower garland) ಬೇಡಿಕೆ ಬಂದಿದೆ. ಬಹಿರಂಗ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಕ್ಕ ಬೆನ್ನಲ್ಲೇ ಹಾರಕ್ಕೆ ಪ್ರತಿ ದಿನ ಬೇಡಿಕೆ ಬರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಬಗೆ ಬಗೆಯ ಹಾರಗಳಿಗೆ ಆರ್ಡರ್ ಕೊಡುತ್ತಿದ್ದಾರೆ. 10, 15, 20 ಅಡಿ ಎತ್ತರದ ಕಸ್ಟಮೈಸ್ಡ್ ಹಾರಗಳಿಗೆ ಆರ್ಡರ್ ನೀಡಲಾಗುತ್ತಿದೆ. 15 ಅಡಿ ಎತ್ತರದ ಹೂವಿನ ಹಾರವನ್ನು 15 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ 170 ರಿಂದ 200 ಹೂವಿನ ಹಾರಗಳು ಕೆ.ಆರ್. ಮಾರ್ಕೆಟ್ನಲ್ಲಿ (City Market)ವ್ಯಾಪಾರವಾಗುತ್ತಿದೆ.
ಉಳಿದಂತೆ ಗುಲಾಬಿ ಹಾರ, ಚೆಂಡು ಹೂವಿನ ಹಾರ, ಮಲ್ಲಿಗೆ ಹಾರ ಹೀಗೆ ಬಗೆಬಗೆಯ ಹಾರಗಳು ಮಾರುಕಟ್ಟೆಯಲ್ಲಿದೆ. ಇಂತಹ ಹೂವಿನ ಹಾರಗಳಿಗೆ 3 ಸಾವಿರದಿಂದ 15 ಸಾವಿರ ರೂಪಾಯಿವರೆಗೂ ದರ ನಿಗದಿ ಮಾಡಲಾಗಿದೆ. ಒಂದೆಡೆ ವ್ಯಾಪಾರಿಗಳಿಗೆ ಸಂತಸ ತಂದಿದ್ದರೆ, ಮತ್ತೊಂದೆಡೆ ಪೂಜೆ, ಮನೆಯ ಸಮಾರಂಭಗಳಿಗೆ ಹೂವಿನ ಹಾರ ಖರೀದಿಗೆ ಬರುವ ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಚುನಾವಣೆ ನೆಪದಲ್ಲಾದರೂ ವ್ಯಾಪಾರ ಕೊಂಚ ಚೇತರಿಕೆ ಕಂಡಿರುವುದು ಹೂವಿನ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಗಿದೆ.