ಚಂಡೀಗಢ: ರೈಲಿನಿಂದ ಇಳಿಯುವ ಮುನ್ನ ಲೋಕೋಪೈಲೆಟ್ ಹ್ಯಾಂಡ್ ಬ್ರೇಕ್ ಹಾಕಲು ಮರೆತ ಪರಿಣಾಮ ಗೂಡ್ಸ್ ರೈಲೊಂದು ಸುಮಾರು 70 ಕಿಲೋಮೀಟರ್ಗಳವರೆಗೂ ವೇಗವಾಗಿ ಚಲಿಸಿದ ಘಟನೆ ಪಂಜಾಬ್ನಲ್ಲಿ ನಡೆದಿದೆ. ಕಲ್ಲುಗಳನ್ನು ತುಂಬಿದ್ದ ಗೂಡ್ಸ್ ರೈಲನ್ನು ಪಠಾಣ್ಕೋಟ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.
ಬಳಿಕ ಚಾಲಕ ರೈಲಿನಿಂದ ಇಳಿದಿದ್ದರು. ಈ ವೇಳೆ ರೈಲು ಇದ್ದಕ್ಕಿದ್ದಂತೆ ಚಲಿಸಲು ಆರಂಭಿಸಿದೆ. ಸ್ವಲ್ಪ ಸಮಯದ ಬಳಿಕ ರೈಲು ಸುಮಾರು 100 ಕಿ.ಮೀ ವೇಗವನ್ನು ಪಡೆದುಕೊಂಡು, ಐದು ರೈಲ್ವೇ ನಿಲ್ದಾಣಗಳನ್ನು ದಾಟಿ 70 ಕಿಲೋಮೀಟರ್ ವರೆಗೂ ಸಂಚರಿಸಿದೆ. ಬಳಿಕ ರೈಲ್ವೇ ಅಧಿಕಾರಿಗಳು ರೈಲನ್ನು ತಡೆಯಲು ಸಿದ್ಧತೆ ಮಾಡಿಕೊಂಡು ರೈಲ್ವೇ ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಹಾಕಿದ ನಂತರ ರೈಲು ನಿಂತಿದೆ.
ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಡೆಯದಂತೆ ಎಚ್ಚರವಹಿಸುತ್ತೇವೆ. ಇಂದಿನ ಘಟನೆಯಲ್ಲಿ ಸುರಕ್ಷತಾ ಲೋಪಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಈ ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.