ಬೆಂಗಳೂರು: ಮೊನ್ನೇ ಬುಧವಾರವಷ್ಟೇ(ಮೇ.10) ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ಗೆ (Congress) ಅಧಿಕಾರದ ಗದ್ದುಗೆ ಎಂಬ ಭವಿಷ್ಯ ನುಡಿದಿವೆ. ಹೀಗಾಗಿ ಕೈ ಪಾಳಯದಲ್ಲಿ ಹುರುಪು ಹೆಚ್ಚಿಸಿದೆ. ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ ಎಂದಿವೆ.
ಕೆಲ ಕೆಲ ಸಮೀಕ್ಷೆಗಳು ಈ ಬಾರಿ ಅತಂತ್ರ ಫಲಿತಾಂಶ ಎಂದು ಸರ್ವೇ ರಿಪೋರ್ಟ್ ನೀಡಿವೆ. ಮತದಾನೋತ್ತರ ಸಮೀಕ್ಷೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಚಟುವಟಿಕೆ ಗರಿಗೆದರುವಂತೆ ಮಾಡಿದೆ. ಇದರಿಂದ ಕಾಂಗ್ರೆಸ್(Congress) , ತನ್ನ ಅಭ್ಯರ್ಥಿಗಳಿಗೆ ಫಲಿತಾಂಶಕ್ಕೂ ಮುನ್ನವೇ ಮಹತ್ವದ ಸಂದೇಶವನ್ನು ರವಾನಿಸಿದೆ.
ನಾಳೆ ಮತದಾರನ ತೀರ್ಪು ಹೊರಬೀಳಲಿದೆ. ಏನ್ ಬೇಕಾದ್ರೂ ಆಗುವ ಸಾಧ್ಯತೆ ಇದೆ. ಹೀಗಾಗಿ ಕೈ ಪಡೆ ಫುಲ್ ಅಲರ್ಟ್ ಆಗಿದೆ. ನಿನ್ನೆ ರಾತ್ರಿ ಸಿದ್ದರಾಮಯ್ಯರ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜತೆ ಹೋವೋಲ್ಟೇಜ್ ಸಭೆ ನಡೆಸಿದ್ದು, ಸಭೆಯಲ್ಲಿ ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷ ಗೆದ್ದರೆ ಮುಂದೆ ಏನ್ ಮಾಡಬೇಕು.
ಅತಂತ್ರವಾದ್ರೆ ಯಾವ ರಣತಂತ್ರ ರೂಪಿಸಬೇಕು ಎನ್ನುವ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ. ಎಕ್ಸಿಟ್ ಪೋಲ್ನಲ್ಲಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ಚಟುವಟಿಕೆ ಗರಿಗೆದರಿದೆ. ನಿನ್ನೆ ತಡರಾತ್ರಿ ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ 224 ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ಝೂಮ್ ಮೀಟಿಂಗ್ ನಡೆಸಿದ್ದು ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಿದ್ದಾರೆ.ಈ ವೇಳೆ ಅಭ್ಯರ್ಥಿಗಳಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.