ಬೆಂಗಳೂರು ;-;ಬೆಂಗಳೂರಿನ ಅಭಿವೃದ್ಧಿಗೆ ಆರು ತಿಂಗಳಲ್ಲಿ ನೀಲನಕ್ಷೆ, ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು” ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಸಭೆಯಲ್ಲಿ ಅನೇಕ ಮೌಲ್ಯಯುತ ಸಲಹೆಗಳು ಬಂದಿವೆ. ಎಲ್ಲರ ಅನುಭವ ಅಭಿಪ್ರಾಯ ಪಡೆಯುತ್ತಿದ್ದೇನೆ. ಮೊದಲು ಎಲ್ಲಾ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ, ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ. ಮುಂದೆ ಮತ್ತೊಂದು ಹಂತದ ಸಭೆ ಮಾಡುತ್ತೇನೆ. ಮುಂದಿನ ವಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು” ಎಂದರು.
ನಮ್ಮ ಆರ್ಥಿಕತೆ ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಬೆಂಗಳೂರಿನ ಸ್ವಾಭಿಮಾನ, ಗೌರವ ಉಳಿಸಲು ಸಲಹೆ ಕೇಳಿದ್ದೇನೆ. ನಾನು ಕೆಲವು ಸಲಹೆ ಒಪ್ಪುತ್ತೇನೆ. ಎಲ್ಲರೂ ನಮಗೆ ಸಲಹೆ ನೀಡಿದ್ದು, ಸ್ಯಾಟಲೈಟ್ ಟೌನ್ ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ. ಫೆರಿಫೆರಲ್ ರಿಂಗ್ ರಸ್ತೆ ಜಾರಿಗೆ ಒತ್ತು ನೀಡಲಾಗುವುದು. ಬೆಂಗಳೂರು ಯೋಜಿತ ನಗರ ಅಲ್ಲ. ಒಂದೇ ದಿನದಲ್ಲಿ ಬದಲಾವಣೆ ಸಾಧ್ಯವಿಲ್ಲ. ಎಲ್ಲರ ಕಷ್ಟಪಟ್ಟು ಉಳಿಸಿಕೊಂಡಿರುವ ಆಸ್ತಿ ಬಗ್ಗೆ ಗೌರವಿಸಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಹಾಗೂ 2 ಮತ್ತು 3ನೇ ದರ್ಜೆ ನಗರಗಳ ಬಗ್ಗೆ ಗಮನಹರಿಸಿ ಬೆಂಗಳೂರಿನ ಮೇಲಿನ ಒತ್ತಡ ಇಳಿಸಬೇಕಿದೆ” ಎಂದು ತಿಳಿಸಿದರು.
ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಅನೇಕ ವರ್ಗ, ಸಂಘ ಸಂಸ್ಥೆಗಳ ಪ್ರಮುಖರ ಜೊತೆ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅವರು ಈ ಬಗ್ಗೆ ಸಲಹೆ ನೀಡಿದ್ದು, ನಾನು ಸಾರ್ವಜನಿಕ ಅಭಿಪ್ರಾಯ ಪಡೆದು ನಂತರ ಸರ್ಕಾರದ ವತಿಯಿಂದ ತೀರ್ಮಾನ ಮಾಡುತ್ತೇವೆ. ಯಾರದೋ ಕಟ್ಟಡವನ್ನು ಏಕಾಏಕಿ ತೆರವು ಮಾಡಲು ಸಾಧ್ಯವಿಲ್ಲ. ಯಾರಿಗೂ ತೊಂದರೆ ಕೊಡಲು ಆಗುವುದಿಲ್ಲ” ಎಂದು ನುಡಿದರು.