ಸಂಸತ್ ಮೇಲೆ ದಾಳಿ ನಡೆಸಿ ಸಿಕ್ಕಿಬಿದ್ದಿರುವ ಆರೋಪಿಗಳೆಲ್ಲರೂ ಕಳೆದ 18 ತಿಂಗಳ ಹಿಂದೆ ಪರಸ್ಪರ ಭೇಟಿಯಾಗಿದ್ದರು. ಭಗತ್ ಸಿಂಗ್ ಅವರ ಅಭಿಮಾನಿಗಳ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿದ್ದು , ಇವರೆಲ್ಲವರು ಅದರ ಭಾಗವಾಗಿದ್ದರು.
ಒಂದೂವರೆ ವರ್ಷಗಳ ಹಿಂದೆ ಫೇಸ್ಬುಕ್ ಮೂಲಕ ಸಂಪರ್ಕ ಬೆಳೆಸಿದ ಆರೋಪಿಗಳು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಪ್ಪಟ ಅಭಿಮಾನಿಗಳಾಗಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿ ವಿರುದ್ದ ತೀವ್ರ ಅಸಮಾಧಾನ ಹೊಂದಿದ್ದರು.ಕಳೆದ ಡಿ.13ರ ಬುಧವಾರದಂದು ಲೋಕಸಭೆಯಲ್ಲಿ ನಡೆದ ಭದ್ರತಾ ಲೋಪ ಘಟನೆಯ ಒಟ್ಟು ಆರು ಆರೋಪಿಗಳು ಭಾರತದ ವಿವಿಧ ಭಾಗಗಳಿಂದ ಬಂದವರಾಗಿದ್ದಾಗಿದ್ದಾರೆ.
ಜನವರಿಯಲ್ಲಿ ಯೋಜನೆ ಆರಂಭಿಸಿದರು
ಹಲವಾರು ಮೂಲಗಳ ಪ್ರಕಾರ, ಆರೋಪಿಗಳ ಮೊದಲ ಸಭೆಯೂ ಸುಮಾರು ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲೇ ನಡೆದಿತ್ತು. ಐವರು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಸಂಪರ್ಕಕ್ಕೆ ಬಂದ ನಂತರ ಫೇಸ್ ಬುಕ್ ನಲ್ಲಿ ಭಗತ್ ಸಿಂಗ್ ಅಭಿಮಾನಿಗಳು ಪುಟವನ್ನು ಸೇರಿಕೊಂಡಿದ್ದರು.ಆರೋಪಿಗಳಾದ ಲಲಿತ್ , ಸಾಗರ್ ಮತ್ತು ಮನೋರಂಜನ್ ಮೈಸೂರಿನಲ್ಲಿ ಭೇಟಿಯಾಗಿದ್ದರು ಮತ್ತು ನಂತರ ನೀಲಂ ಮತ್ತು ಅಮೋಲ್ ಅವರನ್ನು ಸೇರಿಸಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್ ಡಿಟಿವಿ ವರದಿ ಮಾಡಿದ್ದು, ಈ ಸಭೆಯಲ್ಲಿ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳು, ಹೈಲೈಟ್ ಮಾಡಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಅದರಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರ ಹಿಂಸಾಚಾರದಂತಹ ಸಮಸ್ಯೆಗಳು ಪ್ರಮುಖವಾಗಿದ್ದವು.