ಮುಂಬೈ: ಗ್ಲೇನ್ ಮ್ಯಾಕ್ಸ್ವೆಲ್ (Glenn Maxwell) ಭರ್ಜರಿ ದ್ವಿಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ (Australia) ತಂಡವು ಅಫ್ಘಾನಿಸ್ತಾನದ ವಿರುದ್ಧ 3 ವಿಕೆಟ್ಗಳ ಅಮೋಘ ಜಯ ಸಾಧಿಸಿದ್ದು, ವಿಶ್ವಕಪ್ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಪಂದ್ಯಗೆದ್ದು ಸೆಮೀಸ್ ಪ್ರವೇಶಿಸುವ ಆಸೆಯಲ್ಲಿದ್ದ ಅಫ್ಘಾನಿಸ್ತಾನ ತಂಡದ ಕನಸು ಭಗ್ನಗೊಂಡಿದೆ.
ಟಾಸ್ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ (Afghanistan) ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 46.5 ಓವರ್ಗಳಲ್ಲೇ 293 ರನ್ ಗಳಿಸಿ ಜಯ ಸಾಧಿಸಿತು
ಆಸ್ಟ್ರೇಲಿಯಾ ಆರಂಭದಲ್ಲೇ ಎಡವಿತು, ಪವರ್ ಪ್ಲೇ ಮುಗಿಯುವಷ್ಟರಲ್ಲೇ 52 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರವೂ ಆಫ್ಘನ್ ಬೌಲರ್ಗಳು ಬೆಂಬಿಡದೇ ಆಸೀಸ್ ಮೇಲೆ ತಮ್ಮ ಪರಾಕ್ರಮ ಮುಂದುವರಿಸಿ 39 ರನ್ಗಳ ಅಂತರದಲ್ಲೇ ಇನ್ನೂ 7 ವಿಕೆಟ್ಗಳನ್ನ ಉಡೀಸ್ ಮಾಡಿದ್ದರು. ಇದು ಆಸ್ಟ್ರೇಲಿಯಾಗೆ ದೊಡ್ಡ ಆಘಾತವಾಯಿತು. ಸ್ಫೋಟಕ ಬ್ಯಾಟ್ಸ್ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್ ಶೂನ್ಯ ಸುತ್ತಿದ್ದರು. ಡೇವಿಡ್ ವಾರ್ನರ್ 18 ರನ್, ಮಿಚೆಲ್ ಮಾರ್ಚ್ 24 ರನ್, ಮಾರ್ನಸ್ ಲಾಬುಶೇನ್ 14 ರನ್, ಮಾರ್ಕಸ್ ಸ್ಟೋಯ್ನಿಸ್ 6 ರನ್, ಮಿಚೆಲ್ ಸ್ಟಾರ್ಕ್ 3 ರನ್ಗಳಿಗೆ ವಿಕೆಟ್ ಕೈಚೆಲ್ಲಿದರು.
ಇದರಿಂದ ಆಸ್ಟ್ರೇಲಿಯಾ ತಂಡದ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಮ್ಯಾಕ್ಸ್ವೆಲ್ ಏಕಾಂಗಿ ಹೋರಾಟದಿಂದ ಆಸೀಸ್ ತಂಡ ಅಮೋಘ ಜಯ ಸಾಧಿಸಿತು. ಮುರಿಯದ 8ನೇ ವಿಕೆಟ್ಗೆ ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಜೋಡಿ 170 ಎಸೆತಗಳಲ್ಲಿ 202 ರನ್ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ತಡ ಸೇರಿಸಿದರು. ಮ್ಯಾಕ್ಸ್ವೆಲ್ 128 ಎಸೆತಗಳಲ್ಲಿ 201 ರನ್ (10 ಸಿಕ್ಸರ್, 21 ಬೌಂಡರಿ) ಬಾರಿಸಿದ್ರೆ, ಪ್ಯಾಟ್ ಕಮ್ಮಿನ್ಸ್ 12 ರನ್ ಗಳಿಸಿ ಅಜೇಯರಾಗುಳಿದರು
ಇನ್ನೂ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ಮಾರಕ ಬೌಲರ್ಗಳ ಬೆವರಿಳಿಸಿದರು. ಅಫ್ಘಾನ್ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್, ಜವಾಬ್ದಾರಿಯುತ ಶತಕ ಸಿಡಿಸಿ, ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಅಫ್ಘಾನಿಸ್ತಾನದ ಆಟಗಾರನೊಬ್ಬ ಶತಕ ಸಿಡಿಸಿದ ಸಾಧನೆ ಮಾಡಿದರು. ಇದರೊಂದಿಗೆ ವಿಶ್ವಕಪ್ ಕ್ರಿಕೆಟ್ನಲ್ಲೇ ಅಫ್ಘಾನಿಸ್ತಾನ ತಂಡ ಗಳಿಸಿದ ಅತ್ಯಧಿಕ ಸ್ಕೋರ್ ಇದಾಗಿತ್ತು.