ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಐದು ತಿಂಗಳ ಬಳಿಕ ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿದ್ದಾರೆ. ದರ್ಶನ್ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ. 5 ತಿಂಗಳ ಜೈಲುವಾಸದ ಬಳಿಕ ಮನೆಗೆ ಬಂದಿರುವ ಮಗನನ್ನು ನೋಡಲು ಮೀನಾ ತೂಗುದೀಪ ರಾಜ ರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಗೆ ಆಗಮಿಸಿದ್ದಾರೆ.
ವಿಜಯಲಕ್ಷ್ಮಿ ನೆಲೆಸಿರುವ ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್ಗೆ ಮೊಮ್ಮಗ ಚಂದನ್ ಜೊತೆ ಮಗನನ್ನು ನೋಡಲು ಆಗಮಿಸಿದ್ದಾರೆ. ದೀಪಾವಳಿ ಹಬ್ಬ, ಮೊಮ್ಮಗ ವಿನೀಶ್ ಹುಟ್ಟುಹಬ್ಬವನ್ನು ಆಚರಿಸುವುದರ ಜೊತೆಗೆ ಮಗ ದರ್ಶನ್ನನ್ನು ನೋಡಿ ಮೀನಾ ಖುಷಿಪಟ್ಟಿದ್ದಾರೆ. ಇದೇ ವೇಳೆ, ಅಪಾರ್ಟ್ಮೆಂಟ್ ಬಳಿ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
ಅಕ್ಟೋಬರ್ 30ರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾ ತಂಡದ ಜೊತೆ ಮಹತ್ವದ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈಗ ಹೈಕೋರ್ಟ್ ನೀಡಿರುವ ಆದೇಶವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಸೋಮವಾರ (ಅಕ್ಟೋಬರ್ 4) ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಚಿಂತಿಸಲಾಗಿದೆ. ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿದರೆ ದರ್ಶನ್ಗೆ ಹಿನ್ನಡೆ ಆಗಬಹುದು.
.