ಬೆಂಗಳೂರು: ಬೆಂಗಳೂರಿನಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಲು ಜೆಡಿಎಸ್ ಕಸರತ್ತು ನಡೆಸಿದೆ. ಬಸವನಗುಡಿಯಲ್ಲಿ ಜೆಡಿಎಸ್ ಗೆಲ್ಲಿಸಲು ಮಿಡ್ ನೈಟ್ ಮೀಟಿಂಗ್ ನಡೆದಿದ್ದು, ಕ್ಷೇತ್ರದಲ್ಲಿ ಸಮುದಾಯ ಕ್ರೋಡಿಕರಣಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದಾರೆ.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಟಿಎ ಶರವಣ ಮತ್ತು ಅಭ್ಯರ್ಥಿ ಅರಮನೆ ಶಂಕರ್ ಮಹತ್ವದ ಸಭೆ ನಡೆಸಿ, ದೇವೇಗೌಡರ ಸೂಚನೆಯಂತೆ ಪ್ರತಿ ಸಮುದಾಯವನ್ನ ಸೆಳೆಯಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಸ್ಥಳದಲ್ಲಿ ಸಮುದಾಯವಾರು ಸಭೆ ನಡೆಸುತ್ತಿರುವ ಪರಿಷತ್ ಸದಸ್ಯ ಟಿ ಎ ಶರವಣ ರಾತ್ರಿ ವಿಶ್ವಕರ್ಮ ಆರ್ಯವೈಶ್ಯ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದರು.
ಈ ಬಾರಿಯ (election2023)ಕರ್ನಾಟಕ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ಅರಮನೆ ಶಂಕರ್ ಅವರಿಗೆ ಪ್ರತಿಯೊಬ್ಬರು ಬೆಂಬಲ ಸೂಚಿಸಿ, ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವಂತೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಭೆಯಲ್ಲಿ ಟಿಎ ಶರವಣ ಅವರು ಮನವಿ ಮಾಡಿದರು.
ಚಿಕ್ಕ ಚಿಕ್ಕ ಸಮುದಾಯವನ್ನು ಜೆಡಿಎಸ್ ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಬ್ರಾಹ್ಮಣ,ವಿಶ್ವಕರ್ಮ, ಆರ್ಯವೈಶ್ಯ, ಮಡಿವಾಳ ಉಪ್ಪಾರ ಸೇರಿ ಹಲವು ಸಮುದಾಯದ ಮುಖಂಡರ ಜೊತೆ ಸಭೆ ನಡೆಸಲು ಪ್ಲಾನ್ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್ ಗೆಲ್ಲಿಸಲು ತೆರೆಮರೆಯಲ್ಲಿ ಕಸರತ್ತು ಜೋರಾಗಿದೆ.
ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಸಮುದಾಯ ಸಮೀಕರಣಕ್ಕೆ ಪ್ಲಾನ್ ಮಾಡಲಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು. ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಮತ ಪ್ರಮಾಣ ಹೊಂದಿರುವ ಜೆಡಿಎಸ್ ಒಕ್ಕಲಿಗ ಮತಗಳ ಪ್ರಾಬಲ್ಯ ಹೆಚ್ಚಾಗಿದ್ದು ಅದರ ಜೊತೆ ಜೊತೆಗೆ ಸಣ್ಣ ಸಮುದಾಯಗಳ ಬೆಂಬಲದಿಂದ ಚುನಾವಣೆ ಗೆಲ್ಲುವ ಕಸರತ್ತನ್ನ JDS ನಡೆಸುತ್ತಿದೆ.