ಚೆನ್ನೈ: ಐಪಿಎಲ್ 2024ರ ಫೈನಲ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಸಜ್ಜಾಗಿದ್ದು, ಈ ಬಾರಿ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ. 17ನೇ ಆವೃತ್ತಿಯ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ರೋಚಕ ಕಾದಾಟ ನಡೆಯಲಿದೆ.
ಐಪಿಎಲ್ 2024ರ ಲೀಗ್ ಹಂತದ ಅಗ್ರ ಎರಡು ತಂಡಗಳಾಗಿರುವ ಕೆಕೆಆರ್ ಮತ್ತು ಎಸ್ಆರ್ಹೆಚ್, ಮತ್ತೊಮ್ಮೆ ರನ್ ಮಳೆ ಹರಿಸಲು ಸಜ್ಜಾಗಿವೆ. ಆದರೆ, ಚೆನ್ನೈನ ನಿಧಾನ ಗತಿಯ ಪಿಚ್ ಉಭಯ ತಂಡಗಳ ಸ್ಫೋಟಕ ಆಟಕ್ಕೆ ಹೇಗೆ ವರ್ತಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಅಹಮದಾಬಾದ್ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡದ ವಿರುದ್ಧ ಗೆದ್ದ ಕೆಕೆಆರ್, ನೇರವಾಗಿ ಫೈನಲ್ ಪ್ರವೇಶಿಸಿತು. ಇದೇ ವೇಳೆ ಕೆಕೆಆರ್ ವಿರುದ್ಧ ಸೋತ ಸನ್ರೈಸರ್ಸ್, ಆ ಬಳಿಕ ಎರಡನೇ ಕ್ವಾಲಿಫೈಯರ್ ಕದನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 36 ರನ್ಗಳಿಂದ ಗೆದ್ದು ಮತ್ತೆ ಕೆಕೆಆರ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಶುಕ್ರವಾರವಷ್ಟೇ ಚೆಪಾಕ್ ಮೈದಾನದಲ್ಲಿ ರಾಜಸ್ಥಾನವನ್ನು ಸೋಲಿಸಿದ ಹೈದರಾಬಾದ್ಗೆ ಈ ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಅರಿವಾಗಿದೆ. ಎರಡೂ ತಂಡಗಳ ಬ್ಯಾಟಿಂಗ್, ಬೌಲಿಂಗ್ ವಿಭಾಗ ಬಲಿಷ್ಟವಾಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ನಟ-ನಟಿಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕೆಕೆಆರ್ ತಂಡ 14 ಪಂದ್ಯಗಳಲ್ಲಿ 9 ಪಂದ್ಯವನ್ನು ಗೆದ್ದು, 3 ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಇನ್ನೂ 2 ಪಂದ್ಯ ಮಳೆಗೆ ಬಲಿಯಾಗಿದೆ. ಒಟ್ಟು 20 ಅಂಕಗಳನ್ನು ಗಳಿಸಿ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಎಸ್ಆರ್ಹೆಚ್ ತಂಡ 14 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು, 5 ಪಂದ್ಯದಲ್ಲಿ ಸೋಲುಂಡಿದೆ. ಒಟ್ಟು 17 ಅಂಕಗಳನ್ನು ಗಳಿಸಿರುವ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ.