ಇತ್ತೀಚೆಗಷ್ಟೇ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ್ದ ನಟ ಮೆಗಾಸ್ಟಾರ್ ಚಿರಂಜೀವಿ ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಸಮೃದ್ಧ ಚಲನಚಿತ್ರ ನಟ, ನರ್ತಕನೆಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಇದೇ ವಿಚಾರವಾಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಬಾಲಿವುಡ್ ನಟ ಆಮಿರ್ ಖಾನ್ ಕೂಡ ಭಾಗಿಯಾಗಿದ್ದರು.
ಚಿರಂಜೀವಿ ಅವರು ಈವರೆಗೂ 156 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಳೆದ 46 ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಈವರೆಗಿನ ತಮ್ಮ ವೃತ್ತಿ ಜೀವನದಲ್ಲಿ ಚಿರಂಜೀವಿ ಅವರು 537 ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. 24 ಸಾವಿರ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದಾರೆ. ಈ ಸಾಧನೆಗಾಗಿ ಅವರ ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ.
ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಅವರಿಂದ ಚಿರಂಜೀವಿಯವರು ವಿಶ್ವ ಗಿನ್ನೆಸ್ ದಾಖಲೆಯ ಪ್ರಶಸ್ತಿ ಪಡೆದರು. ಬಳಿಕ ಮಾತನಾಡಿದ ಅಮೀರ್ ಖಾನ್ ‘ನಾನು ಇಲ್ಲಿಗೆ ಬಂದಿರೋದು ಸಂತೋಷ. ಚಿರಂಜೀವಿಯವರ ಅಭಿಮಾನಿಗಳನ್ನು ನೋಡಲು ಸಂತೋಷವಾಗುತ್ತಿದೆ. ನಿಮ್ಮೊಂದಿಗೆ ನನ್ನನ್ನು ಸೇರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಅವರ ದೊಡ್ಡ ಅಭಿಮಾನಿ ಎಂದರು.
1978ರಲ್ಲಿ ಭಾರತೀಯ ಸಿನಿಮಾ ರಂಗಕ್ಕೆ ಕಾಲಿಟ್ಟ ಚಿರಂಜೀವಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಅಂದ ಹಾಗೆ ಚಿರಂಜೀವಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪಡೆದಿದ್ದ ಕೂಡ ವಿಶೇಷ ದಿನದಂದೆ. ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಕೂಡ 1978ರ ಸೆಪ್ಟೆಂಬರ್ 22ರಂದು.