ನಟ ದರ್ಶನ್ ಹಾಗೂ ಸಂಗಡಿಗರಿಂದ ಭೀಕರವಾಗಿ ಹತ್ಯೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮನೆಗೆ ಇಂದು ಚಲನ ಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಭೇಟಿ ನೀಡಲಿದ್ದಾರೆ. ರೇಣುಕಾಸ್ವಾಮಿ ಪೋಷಕರು ಹಾಗೂ ಪತ್ನಿಗೆ ಸಾಂತ್ವಾನ ನೀಡಲು ತೆರಳಿದ್ದಾರೆ.
ಸಾರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್ ಸೇರಿದಂತೆ 15ಕ್ಕೂ ಹೆಚ್ಚು ಸದಸ್ಯರು ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಲಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆರೋಪಿ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಹಾಗೂ ಅಸಹಕಾರ ನೀಡುವುದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆರೋಪ ಸಾಬೀತಾದರೆ ಅಸಹಕಾರ ನೀಡುವ ವಿಚಾರಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಎನ್.ಎಂ ಸುರೇಶ್ ಜೂ.13ರಂದು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಅವರನ್ನು ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳು ಭಾಗಿಯಾಗಬೇಕು ಎಂದು ಅವರು ಹೇಳಿದ್ದಾರೆ. ಇದೀಗ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡುತ್ತಿರುವ ವಾಣಿಜ್ಯ ಮಂಡಳಿ ಸದಸ್ಯರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಲಿದ್ದಾರೆ.