ಬೆಳಗಾವಿ: ಬಿಜೆಪಿ- ಕಾಂಗ್ರೆಸ್ ನಾಯಕರ ಪ್ರತಿಷ್ಠೆಯಿಂದ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದ ರಾಜಹಂಸಗಡ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿಈಗ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮೂಗು ತೂರಿಸಿದೆ. ರಾಜಕೀಯ ಬಲಹೀನವಾದ ಎಂಇಎಸ್ ಮೂರ್ತಿ ಶುದ್ಧೀಕರಣ ನೆಪದಲ್ಲಿ ಬಲ ವರ್ಧಿಸಿಕೊಳ್ಳಲು ಮುಂದಾಗಿದೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ರಾಜಹಂಸಗಡ ಕೋಟೆ ಮೇಲಿನ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಚಾರ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ್ ನಡುವೆ ಪ್ರತಿಷ್ಠೆಯ ಕದನವಾಗುವ ಲಕ್ಷಣಗಳು ಆರಂಭದಿಂದಲೇ ಕಂಡುಬಂದಿತ್ತು. ಕ್ಷೇತ್ರದಲ್ಲಿ ಲಕ್ಷ್ಮೀ ಅವರ ರಾಜಕೀಯ ವೈರಿ ಎಂದೇ ಪರಿಗಣಿಸಲಾಗುವ ಶಾಸಕ ರಮೇಶ ಜಾರಕಿಹೊಳಿ ಕಾಣಿಸಿಕೊಳ್ಳತೊಡಗಿದ ಬಳಿಕ ಪೈಪೋಟಿ ತೀವ್ರಗೊಂಡಿತ್ತು.
ಶಿವಾಜಿ ಮೂರ್ತಿ ಉದ್ಘಾಟನೆಯನ್ನು ಮಾ. 5ರಂದು ನಡೆಸಲು ಲಕ್ಷ್ಮೀ ಹೆಬ್ಬಾಳಕರ್ ನಿರ್ಧರಿಸಿದ್ದರು. ಆದರೆ ಮೂರು ದಿನ ಮುಂಚಿತವಾಗಿಯೇ ಮಾ. 2ರಂದು ಸರಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರ್ತಿ ಅನಾವರಣಗೊಳಿಸಿದ್ದರು. ಪಟ್ಟು ಬಿಡದ ಲಕ್ಷ್ಮೀ ಹೆಬ್ಬಾಳಕರ್ ಮಾ. 5ರಂದು ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿ, ಸ್ವತಃ ಶಿವಾಜಿ ಮಹಾರಾಜರ ವಂಶಸ್ಥರಾದ ಯುವರಾಜ ಸಂಭಾಜಿ ರಾಜೆ ಛತ್ರಪತಿ ಅವರಿಂದ ಶಿವಾಜಿ ಮೂರ್ತಿ ಅನಾವರಣಗೊಳಿಸಿದ್ದರು.
ಎಚ್ಚೆತ್ತ ನಾಡದ್ರೋಹಿಗಳು
ಸಂಪೂರ್ಣವಾಗಿ ನೆಲೆ ಕಳೆದುಕೊಂಡಿರುವ ಎಂಇಎಸ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದೆ. ಮರಾಠಿ ಭಾಷಿಕರ ಒಲವು ಅನ್ಯ ಪಕ್ಷಗಳತ್ತ ವಾಲುತ್ತಿರುವುದನ್ನು ಕಂಡು ಆ ಸಂಘಟನೆ ಅಕ್ಷರಶಃ ಕಂಗಾಲಾಗಿದೆ. ಈ ಘಟನೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಭರದಲ್ಲಿ, ಸ್ವತಃ ಶಿವಾಜಿ ಮಹಾರಾಜರ ವಂಶಸ್ಥರಿಂದಲೇ ಅನಾವರಣಗೊಂಡ ಮೂರ್ತಿಯನ್ನು ಮಾ.19ರಂದು ಶುದ್ಧೀಕರಣ ಮಾಡುವುದಾಗಿ ಹೇಳಿಕೆ ನೀಡಿ ಶಿವಾಜಿ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಶುದ್ಧೀಕರಣ ಹೆಸರಿನಲ್ಲಿ ರಾಜಕೀಯ
ಮಾರ್ಚ್ 2ರಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮೂರ್ತಿ ಅನಾವರಣಗೊಳಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ”ಸರಕಾರದ ಅನುದಾನದಲ್ಲಿ ಸ್ಥಾಪನೆಗೊಂಡ ಮೂರ್ತಿ ಅನಾವರಣಗೊಳಿಸುವ ದಿನವನ್ನು ನಾವು ನಿರ್ಧಾರ ಮಾಡಿದ್ದು ಸರಿ ಇದೆ. ಇಂದು ಅಧಿಕೃತವಾಗಿ ಅನಾವರಣಗೊಂಡಿದೆ,” ಎಂದಿದ್ದರು.
ಮಾ.5 ರಂದು ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ”ಮುಖ್ಯಮಂತ್ರಿ ಮೂರ್ತಿ ಅನಾವರಣಗೊಳಿಸುವಾಗ ಮೂರ್ತಿ ಅಪೂರ್ಣವಾಗಿತ್ತು. ಮೂರ್ತಿಗೆ ಬಣ್ಣ ಬಳಿಯುವ ಕಾರ್ಯ ಬಾಕಿ ಇತ್ತು, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ ಮಾಜಿ ಶಾಸಕ ಸಂಜಯ್ ಪಾಟೀಲ್, ಶಾಸಕ ರಮೇಶ ಜಾರಕಿಹೊಳಿ ತರಾತುರಿಯಲ್ಲಿ ಅನಾವರಣ ಕಾರ್ಯಕ್ರಮ ಆಯೋಜಿಸಿದ್ದಾರೆ. ಮೂರ್ತಿಯ ಸಮೀಪದಲ್ಲಿದ್ದ ಬಣ್ಣದ ಬಕೆಟ್, ಕಸಬರಿಗೆ ಸಹ ತೆಗೆಯದೆ ಅನಾವರಣಗೊಳಿಸುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದಾರೆ,”ಎಂದು ಆರೋಪಿಸಿದ್ದರು.
ಪ್ರಸ್ತುತ ಎಂಇಎಸ್ ಶಿವಾಜಿ ಮೂರ್ತಿ ಉದ್ಘಾಟನೆ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದೆ. ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ ಶುದ್ಧೀಕರಣ ಮಾಡುತ್ತೇವೆ ಎಂದು ಆ ಸಂಘಟನೆಯ ನಾಯಕರು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಯುವರಾಜ ಸಂಭಾಜಿ ರಾಜೆ ಛತ್ರಪತಿ ಅವರು ಅನಾವರಣಗೊಳಿಸಿರುವ ಶಿವಾಜಿ ಮೂರ್ತಿಯನ್ನು ಶುದ್ಧೀಕರಣ ಮಾಡುವ ಮೂಲಕ ಎಂಇಎಸ್ ಶಿವಾಜಿ ಭಕ್ತರಿಗೆ ಅವಮಾನ ಮಾಡಲು ಹೊರಟಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ವಿಚಾರವನ್ನು ಬಿಜೆಪಿ- ಕಾಂಗ್ರೆಸ್ ಪಕ್ಷಗಳು ರಾಜಕೀಯಗೊಳಿಸಿದ್ದರಿಂದ ಮೂರ್ತಿ ಶುದ್ಧೀಕರಣ ಮಾಡುತ್ತೇವೆ ಎಂದು ಎಂಇಎಸ್ ಮುಖಂಡ ಮನೋಹರ ಕಿಣೇಕರ್ ಹೇಳಿದ್ದಾರೆ.