ಲಖನೌ: ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಹೊರಗಿಟ್ಟು ನಾಯಕನ ಜವಾಬ್ದಾರಿಯುತ ಆಟವನ್ನು ಪ್ರದರ್ಶಿಸಿದ ರೋಹಿತ್ ಶರ್ಮಾ ಅವರನ್ನು ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತಮ್ಮ ನಾಯಕತ್ವದ 100ನೇ ಪಂದ್ಯದಲ್ಲಿ ಆಕರ್ಷಕ 87 ರನ್ ಸಿಡಿಸಿದ ಹಿಟ್ಮ್ಯಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಭಾನುವಾರ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ಗಳ ಮಾರಕ ದಾಳಿಗೆ ನಲುಗಿದ್ದ ಭಾರತ ತಂಡ 30 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಈ ವೇಳೆ 101 ಎಸೆತದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 87 ರನ್ ಗಳಿಸಿ ತಂಡದ ಮೊತ್ತವನ್ನು 229ಕ್ಕೆ ತಲುಪಿಸಿದ್ದ ರೋಹಿತ್ ಶರ್ಮಾ ಆಟವನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಶ್ಲಾಘಿಸಿದ್ದಾರೆ.
ಇಂಗ್ಲೆಂಡ್ ವಿರುದ್ದ ಭಾರತ ತಂಡ 100 ರನ್ಗಳ ಅಂತರದಲ್ಲಿ ಗೆಲುವು ಪಡೆದ ಬಳಿಕ ಕ್ರಿಕ್ಬಝ್ ಜೊತೆ ಮಾತನಾಡಿದ ಮೈಕಲ್ ವಾನ್, ರೋಹಿತ್ ಶರ್ಮಾ ಅವರ ನಾಯಕತ್ವದ ಗುಣಗಳು ಹಾಗೂ ಪಂದ್ಯದ ಕಾರ್ಯವಿಧಾನವನ್ನು ಹೊಗಳಿದ್ದಾರೆ.
“ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದರು. ಆದರೆ, ಇಂಗ್ಲೆಂಡ್ ಬೌಲರ್ಗಳ ಶಿಸ್ತುಬದ್ಧ ದಾಳಿಯಿಂದ 30ಕ್ಕೆ 3 ವಿಕೆಟ್ ಕಳೆದುಕೊಂಡ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಕೆಎಲ್ ರಾಹುಲ್ ಜೊತೆಗೂಡಿದ ರೋಹಿತ್ ಶರ್ಮಾ ಉತ್ತಮ ಜೊತೆಯಾಟದಿಂದ ತಂಡಕ್ಕೆ ಆಸರೆಯಾಗಿದ್ದರು. ರೋಹಿತ್ ಶರ್ಮಾ ತುಂಬಾ ಆಕ್ರಮಣಕಾರಿ ಆಟ ಆಡುವ ಮನಸ್ಥಿತಿಯುಳ್ಳ ಆಟಗಾರ. ಚೆಂಡನ್ನು ಬಲವಾಗಿ ದಂಡಿಸಿ ಬೌಂಡರಿಗಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ತಂಡದ ಒತ್ತಡವನ್ನು ತಗ್ಗಿಸಲು ತಮ್ಮ ನೈಜ ಆಟವನ್ನು ಪಕ್ಕಕ್ಕಿಟ್ಟು ರಾಹುಲ್ ಜೊತೆ ಟೆಸ್ಟ್ ಪಂದ್ಯದ ರೀತಿ ಆಟಕ್ಕೆ ಮುಂದಾಗಿದ್ದರು,” ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದಾರೆ.