ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಗಾಗ ಸುದ್ದಿಯಾಗುತ್ತಲೆ ಇರುತ್ತಾರೆ. ಸದ್ಯ ವಿವೆಕ್ ಅಗ್ನಿಹೋತ್ರಿ ಹೊಸ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಒಂದು ಕಹಿ ಸುದ್ದಿ ಕೇಳಿಬಂದಿದೆ. ಕಳೆದ ವಾರ ತಮ್ಮದೇ ಸಿನಿಮಾದ ಹೀರೋಗೆ ವಿವೇಕ್ ಅಗ್ನಿಹೋತ್ರಿ ಗೇಟ್ಪಾಸ್ ನೀಡಿದ್ದಾರಂತೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಆದರೆ ಆ ಹೀರೋ ಯಾರು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
ವಿವೇಕ್ ಅಗ್ನಿಹೋತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಾಬ್ರಾ ಮಾಡಿದ ಒಂದು ‘ಎಕ್ಸ್’ ಪೋಸ್ಟ್ಗೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯಿಸಿದ್ದಾರೆ. ‘ಚಿತ್ರರಂಗದ ಸದ್ಯದ ಪರಿಸ್ಥಿತಿ: ಒಬ್ಬ ನಟ, 200 ಕಾಸ್ಟಿಂಗ್ ಡೈರೆಕ್ಟರ್ ಮತ್ತು 15,680 ಮ್ಯಾನೇಜರ್ಗಳು’ ಎಂದು ಮುಕೇಶ್ ಛಾಬ್ರಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವಾಗ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಸಿನಿಮಾ ತಂಡದಲ್ಲಿ ಆದ ವಿಚಾರವನ್ನು ತಿಳಿಸಿದ್ದಾರೆ.
‘ನನ್ನ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವ ಒಬ್ಬ ನಟನನ್ನು ಕಳೆದ ವಾರ ನಾನು ಕಿತ್ತುಹಾಕಬೇಕಾಯಿತು. ಅದಕ್ಕೆ ಆತನ ಮ್ಯಾನೇಜರ್ನ ದುರಹಂಕಾರವೇ ಕಾರಣ. ದೊಡ್ಡ ಸೆಲೆಬ್ರಿಟಿಯ ಮಕ್ಕಳ ಟ್ಯಾಲೆಟ್ ಏಜೆನ್ಸಿಯ ನೌಕರ ಎಂಬ ಕಾರಣಕ್ಕೆ ತಾನು ಆ ರೀತಿ ನಡೆದುಕೊಳ್ಳಬಹುದು ಅಂದುಕೊಡ್ಡಿದ್ದ ಆತ. ಇಂಥ ಮಧ್ಯವರ್ತಿಗಳು ಅನೇಕರ ಜೀವನವನ್ನು ಹಾಳು ಮಾಡಿದ್ದಾರೆ. ಇಂಥ ಮಕ್ಕಳಿಗೆಲ್ಲ ಒಂದು ಕಾರ್ಯಗಾರ ಮಾಡಿ, ತರಬೇತಿ ನೀಡಿ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಮುಕೇಶ್ ಛಾಬ್ರಾಗೆ ಹೇಳಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಗೆದ್ದ ನಂತರ ವಿವೇಕ್ ಅಗ್ನಿಹೋತ್ರಿ ಅವರು ಸಾಕಷ್ಟು ವಿವಾದ ಮಾಡಿಕೊಂಡಿದ್ದರು. ಅದರಿಂದಾಗಿ ಅವರು ಹೆಚ್ಚು ಕಾಲ ಸಾರ್ವಜನಿಕ ಚರ್ಚೆಯಲ್ಲಿ ಭಾಗಿಯಾಗಬೇಕಾಯಿತು. ಆದರೆ ಈಗ ಅವರು ಮಾತನಾಡುವುದನ್ನು ಕಡಿಮೆ ಮಾಡಿದ್ದಾರೆ. ಅನಗತ್ಯವಾಗಿ ಚರ್ಚೆಯಲ್ಲಿ ಭಾಗವಹಿಸುವ ಬದಲು ಸಿನಿಮಾದ ಕೆಲಸಗಳ ಮೇಲೆ ಗಮನ ಹರಿಸುವುದು ಸೂಕ್ತ ಎಂದು ಅವರಿಗೆ ಅನಿಸಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ 2023ರಲ್ಲಿ ಬಿಡುಗಡೆಯಾಗಿ ಸೋಲು ಕಂಡಿತು. ಈಗ ಅವರು ಮತ್ತೊಂದು ನೈಜ ಘಟನೆಯನ್ನು ಇಟ್ಟುಕೊಂಡು ಹೊಸ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.