ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಇದೀಗ ಕ್ಷಮೆ ಕೇಳಿದ್ದಾರೆ. ಅವರು ತಮ್ಮ ಉದ್ದೇಶವನ್ನು ಹೇಳಿ ಮಾತನ್ನು ಹಿಂಪಡೆದಿದ್ದಾರೆ. ಸಮಂತಾ ಬಗ್ಗೆ ಸುರೇಖಾ ಹೇಳಿದ್ದ ಅಶ್ಲೀಲ ಕಮೆಂಟ್ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಜೂನಿಯರ್ ಎನ್ಟಿಆರ್, ನಾಗ ಚೈತನ್ಯ ಸೇರಿದಂತೆ ಅನೇಕರು ಈ ಬಗ್ಗೆ ಧ್ವನಿ ಎತ್ತಿದ್ದರು. ಈಗ ಈ ಸಂಬಂಧ ಸುರೇಖಾ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದ್ದಾರೆ.
‘ಎನ್ ಕನ್ವೆಷನ್ ಹಾಲ್ ಉಳಿಸಿಕೊಳ್ಳಲು ಸಮಂತಾ ಅವರನ್ನು ಕಳುಹಿಸುವಂತೆ ನಾಗಾರ್ಜುನ ಬಳಿ ಕೆಟಿಆರ್ ಕೇಳಿದ್ದರು. ಆ ಬಳಿಕ ನಾಗಾರ್ಜುನ ಅವರು ಸಮಂತಾ ಬಳಿ ಹೋಗಿ ಈ ಡೀಲ್ ಬಗ್ಗೆ ಮಾತನಾಡಿದ್ದರು. ಆದರೆ, ಇದಕ್ಕೆ ಒಪ್ಪದ ಸಮಂತಾ ಪತಿ ನಾಗ ಚೈತನ್ಯ ಇಂದ ವಿಚ್ಛೇದನ ಪಡೆದರು’ ಎಂದು ಸುರೇಖಾ ಹೇಳಿಕೆ ನೀಡಿದ್ದರು. ಜೊತೆಗೆ ನಟಿಯರ ಫೋನ್ನ ಕೆಟಿ ರಾಮ್ ರಾವ್ ಟ್ಯಾಪ್ ಮಾಡಿ ನಂತರ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎಂದು ಕೂಡ ಹೇಳಿದ್ದರು.
‘ಮಹಿಳೆಯರ ಬಗ್ಗೆ ಆ ನಾಯಕ ಹೊಂದಿರುವ ಕೀಳು ಮನೋಭಾವವನ್ನು ತೋರಿಸುವುದು ಮಾತ್ರ ನನ್ನ ಉದ್ದೇಶ ಆಗಿತ್ತೇ ಹೊರತು, ಸಮಂತಾ ಅವರ ಭಾವನೆಗೆ ದಕ್ಕೆ ತರೋದಲ್ಲ. ನೀನು ಸ್ವಶಕ್ತಿಯಿಂದ ಬೆಳೆದು ಬಂದ ಬಗ್ಗೆ ನನಗೆ ಅಭಿಮಾನ ಇದೆ. ಅದು ಆದರ್ಶವೂ ಹೌದು’ ಎಂದು ಕೊಂಡಾ ಸುರೇಖಾ ಟ್ವೀಟ್ ಮಾಡಿದ್ದಾರೆ.
‘ನನ್ನ ಕಾಮೆಂಟ್ಗಳಿಂದ ನಿಮಗೆ ಹಾಗೂ ನಿಮ್ಮ ಅಭಿಮಾನಿಗಳಿಗೆ ಬೇಸರ ಆಗಿದ್ದರೆ ನಾನು ನನ್ನ ಕಾಮೆಂಟ್ಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ. ಅನ್ಯಥಾ ಭಾವಿಸಬೇಡಿ’ ಎಂದು ಸುರೇಖಾ ಬರೆದುಕೊಂಡಿದ್ದಾರೆ.
ಸುರೇಖಾ ಮೊದಲು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸಮಂತಾ ಕೂಡ ಈ ಬಗ್ಗೆ ಪೋಸ್ಟ್ ಮಾಡಿ, ‘ರಾಜಕೀಯ ಕೆಸರೆರೆಚಾಟದಲ್ಲಿ ನನ್ನ ಮಧ್ಯೆ ಎಳೆದು ತರಬೇಡಿ’ ಎಂದಿದ್ದರು. ಸಾಕಷ್ಟು ವಿರೋಧಗಳು ವ್ಯಕ್ತವಾದ ಬಳಿಕ ಕೊನೆಗೂ ಕೊಂಡ ಸುರೇಖಾ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.