ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರಅವರ ಇಡಿ ಕಸ್ಟಡಿ ಇಂದಿಗೆ ಅಂತ್ಯವಾಗಿದೆ.
ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರ ಪಾತ್ರ ಕಂಡುಬಂದ ಹಿನ್ನೆಲೆ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿ 11 ದಿನಗಳ ಕಾಲ ತನಿಖೆ ನಡೆಸಿದ್ದಾರೆ.
ನಾಗೇಂದ್ರ ಅವರನ್ನು ಆರಂಭದಲ್ಲಿ 6 ದಿನ ಕಸ್ಟಡಿಗೆ ಪಡೆದಿದ್ದ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿ ಮತ್ತೆ ಕಸ್ಟಡಿಗೆ ಕೇಳಿದ್ದರು. ಈ ಹಿನ್ನೆಲೆ ನ್ಯಾಯಾಲಯ ನಾಗೇಂದ್ರ ಅವರನ್ನು ಎರಡನೇ ಬಾರಿಗೆ 5 ದಿನ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು.
ಇಂದು ನಾಗೇಂದ್ರ ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನು ನಾಗೇಂದ್ರ ಅವರು ಇಡಿ ಕಸ್ಟಡಿಯಲ್ಲಿ ಇರುವಾಗಲೇ ಅವರ ಪತ್ನಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಅಕ್ರಮದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ. ಉಳಿದಂತೆ ಆರೋಪಿಗಳು ಚುನಾವಣೆ ವೇಳೆ ಎಣ್ಣೆಗೆ ಹಣ ಬಳಸಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಕ್ರಮದ ಬಗ್ಗೆ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ನಾಗೇಂದ್ರ ಉತ್ತರಿಸದ ಕಾರಣ ಮತ್ತೊಮ್ಮೆ ಇಡಿ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.