ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ, ಬಿಡುಗಡೆಯಾಗಿರುವ ಮಾಜಿ ಉಪ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರು ನಿಧನರಾಗಿದ್ದಾರೆ ಎಂದು ಭಾವಿಸಿ ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಬಿಜೆಪಿ ಸಂಸದ ಡಾ. ಸಿಎನ್ ಮಂಜುನಾಥ್ ಅವರು ತರಾತುರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ಗುಬ್ಬಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರು ನಿಧನರಾಗಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ತಿಳಿಸಿರುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದ್ದರು.
ತಾವು ತಕ್ಷಣ ದಿಲ್ಲಿಗೆ ಪ್ರಯಾಣಿಸಬೇಕಿದ್ದು, ಈ ಕಾರ್ಯಕ್ರಮ ಮುಂದೂಡಬೇಕಿದೆ. ಎಲ್ಲರೂ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಬಹಿರಂಗ ಸಭೆಯಲ್ಲಿಯೇ ವಿ ಸೋಮಣ್ಣ
ತಿಳಿಸಿದ್ದರು. ಬಳಿಕ ವಾಸ್ತವ ಸಂಗತಿ ತಿಳಿದಾಗ ಅವರು ಪೇಚಿಗೀಡಾದರು. ಸೂಕ್ತ ಮಾಹಿತಿ ಇಲ್ಲದೆ ಹೀಗಾಗಿದೆ ಎಂದು ಅವರು ವಿಷಾದಿಸಿ, ಸಾರ್ವಜನಿಕರ ಕ್ಷಮೆ ಕೋರಿದರು.
ಡಾ. ಸಿಎನ್ ಮಂಜುನಾಥ್ಗೆ ಮುಜುಗರ
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ಡಾ. ಸಿಎನ್ ಮಂಜುನಾಥ್ ಕೂಡ ಇದೇ ರೀತಿ ಎಡವಟ್ಟಿನ ಮೂಲಕ ಮುಜುಗರಕ್ಕೆ ಸಿಲುಕಿದರು. ಕುಣಿಗಲ್ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮಾರಂಭದಲ್ಲಿ ಅವರಿಗೆ ಅಡ್ವಾಣಿ ಅವರ ನಿಧನದ ಬಗ್ಗೆ ಸುಳ್ಳು ಮಾಹಿತಿ ಬಂದಿತ್ತು.
ಸಭೆ ಪ್ರಾರಂಭವಾಗಿ ಸ್ವಾಗತ ಭಾಷಣ ಮಾಡುತ್ತಿದ್ದ ಬಿಜೆಪಿ ಮುಖಂಡ ದೇವರಾಜು, ನಮ್ಮ ಮಾಜಿ ಉಪಪ್ರದಾನಿ ಎಲ್.ಕೆ ಅಡ್ವಾಣಿ ಅವರು ಇಹಲೋಕ ತ್ಯಜಿಸಿದ್ದಾರೆ. ಒಂದು ನಿಮಿಷ ಮೌನ ಅಚರಣೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಪ್ರಕಟಣೆ
ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸದ ಡಾ ಸಿಎನ್ ಮಂಜುನಾಥ್, ಮಾಜಿ ಸಚಿವ ಡಿ ನಾಗರಾಜಯ್ಯ, ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಸೇರಿದಂತೆ ಬಿಜೆಪಿ ಮತ್ತು ಜೆಡಿಸ್ ಕಾರ್ಯಕರ್ತರು ಒಂದು ನಿಮಿಷ ಮೌನಾಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಆದರೆ ವಾಸ್ತವ ಸಂಗತಿ ತಿಳಿದ ಬಳಿಕ ಸಂಸದ ಮಂಜುನಾಥ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದರು. ಸಾಮಾಜಿಕ ಜಾಲತಾಣ ಮಾಡುವ ಎಡವಟ್ಟಿಗೆ ಇದು ಸಾಕ್ಷಿಯಾಗಿದೆ. ಎಲ್ಕೆ ಅಡ್ವಾಣಿ ಅವರ ಆರೋಗದಲ್ಲಿ ಚೇತರಿಕೆ ಕಂಡಿದೆ. ಅವರು ಆರೋಗ್ಯವಾಗಿದ್ದಾರೆ. ಸಭೆ ಆರಂಭದಲ್ಲಿ ಅಭಾಸವಾಗಿದೆ. ಯಾರೂ ಅನ್ಯಥಾ ಭಾವಿಸಬೇಡಿ. ನಾವು ಆಚರಣೆ ಮಾಡಿರುವ ಮೌನವು ಅವರ ಆರೋಗ್ಯ ಚೇರಿಕೆಗಾಗಿ ಮಾಡಿದ ಪ್ರಾರ್ಥನೆಯಾಗಿದೆ ಎಂದು ಸಂಸದರು ಸ್ಪಷ್ಟೀಕರಣ ಕೊಟ್ಟರು.