ಚಾಮರಾಜನಗರ : ನಾಮಪತ್ರ ವಾಪಸ್ಸು ಪಡೆಯುವಂತೆ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು (ಮಲ್ಲಿಕಾರ್ಜುನಸ್ವಾಮಿ)ಗೆ ಸಚಿವ ವಿ.ಸೋಮಣ್ಣ ಆಮಿಷವೊಡ್ಡಿರುವ ಆಡಿಯೋ ವೈರಲ್ ಆಗಿದೆ.
ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಅವರ ಬೆಂಬಲಿಗರಾದ ನಟರಾಜು ಹಾಗೂ ಸುದೀಪ್ ಎಂಬುವರು ಆಲೂರು ಮಲ್ಲು ಅವರಿಗೆ ದೂರವಾಣಿ ಕರೆ ಮಾಡಿ ನಾಮಪತ್ರ ವಾಪಸ್ಸು ಪಡೆದುಕೊಳ್ಳಿ. ನಿಮಗೆ ೫೦ ಲಕ್ಷ ಹಾಗೂ ಸರ್ಕಾರ ಬಂದ ನಂತರ ಗೂಟದ ಕಾರು ಕೊಡಿಸುವುದಾಗಿಯೂ ಆಮಿಷವೊಡ್ಡಿದ್ದು ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.
ಆದರೆ, ಆಲೂರು ಮಲ್ಲು ಅವರು ನಾಮಪತ್ರ ವಾಪಸ್ಸು ಪಡೆಯಲು ಆಗಲ್ಲ. ಪಕ್ಷದಿಂದ ನಾಮಪತ್ರ ಸಲ್ಲಿಸಿರುವುದರಿಂದ ಸಮಸ್ಯೆಯಾಗುತ್ತದೆ. ಆದರೆ, ತಟಸ್ಥ ಆಗುತ್ತೇನೆ ಎಂದು ಹೇಳುತ್ತಾರೆ. ಈ ವೇಳೆ ಮಾತು ಮುಂದುವರಿಸುವ ನಟರಾಜು ಎಂಬುವರು ಚುನಾವಣೆ ಬಳಿಕ ಜೆಡಿಎಸ್ ಪಕ್ಷ ಇರಲ್ಲ ಎಂದು ಹೇಳುತ್ತಾರೆ. ಬಳಿಕ ಸುದೀಪ್ ಎಂಬುವರು ೫೦ ಕ್ಕೆ ಒಪ್ಪಿಕೊಂಡಿದೆ. ಒಪ್ಪಿಸಿಬಿಟ್ಟು ವಿಥ್ ಡ್ರಾ ಮಾಡ್ಬಿಡಿ ಅಂತ ಹೇಳುತ್ತಾರೆ. ಆದರೆ, ಆಲೂರು ಮಲ್ಲು ಅವರು ವಿಥ್ ಡ್ರಾ ಮಾಡಲು ಆಗಲ್ಲ. ಬೇಕಾದರೆ ಕುಮಾರಣ್ಣ ಜೊತೆ ಮಾತಾಡಿ ಫೋನ್ ಮಾಡಿಸಿ ತೊಂದರೆ ಇಲ್ಲ ಎಂದು ಹೇಳುತ್ತಾರೆ. ಸರ್ಕಾರ ಬರುತ್ತದೆ. ಜೆಡಿಎಸ್ ಪಕ್ಷ ಇರಲ್ಲ. ನೀವು ಕಳೆದು ಹೋಗಬೇಡಿ. ಯಾರಿಗೂ ಗೊತ್ತಾಗದಂತೆ ವಿಥ್ ಡ್ರಾ ಕೊಟ್ಟು ಹೋಗಿಬಿಡಿ. ನಾವೆಲ್ಲ ಸಾಕ್ಷಿ ಇದಿವಿ ಎಂದು ಹೇಳುತ್ತಾರೆ.
ಬಳಿಕ ಸುದೀಪ್ ಎಂಬುವರು ವಿ.ಸೋಮಣ್ಣ ಅವರಿಗೆ ಕಾನ್ಫರೆನ್ಸ್ ಮೂಲಕ ಮಾತನಾಡಿಸುತ್ತಾರೆ. ಆಗ ಸೋಮಣ್ಣ ಮಾತನಾಡಿ, ಏಯ್ ನಾಮಪತ್ರ ವಾಪಸ್ಸು ತಗೋ. ಆಮೇಲೆ ಮಾತಾಡ್ತಿನಿ. ಏನಯ್ಯ ನೀನು ಯಾವನ ಮಾತು ಕೇಳಿಕೊಂಡು, ನೀನು ಬದುಕೋಕೆ ಏನೋ ಬೇಕೋ ಎಲ್ಲವೂ ಮಾಡುತ್ತೇನೆ. ಮೊದಲು ವಾಪಸ್ಸು ತಗೋ ಆಮೇಲೆ ಬಾಕಿಯದು ಮಾತಾಡ್ತಿನಿ. ನಿನ್ನ ಎಲ್ಲಿ ತಗೊಂಡು ಹೋಗಿ ಬಿಡಬೇಕೋ ಅಲ್ಲಿ ಬಿಡುತ್ತೀನಿ. ಇರೋದು ಒಂದು ಗಂಟೆ ಬೇಗ ವಾಪಸ್ಸು ತಗೋ. ಸರ್ಕಾರ ಬರುತ್ತದೆ. ಗೂಟದ ಕಾರು ಕೊಡಿಸುತ್ತೇನೆ. ವಾಪಸ್ಸು ತಗೋ ಎಂದು ಆಮಿಷವೊಡ್ಡಿದ್ದಾರೆ. ಬಳಿಕ ಸುದೀಪ್ ಎಂಬುವರು ಕೂಡ ಜಿ.ಟಿ.ದೇವೇಗೌಡರ ಕಡೆಯಿಂದ ಹೇಳಿಸುತ್ತೇನೆ ವಾಪಸ್ಸು ತಗೋ ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ. ಈ ಸಂಭಾಷಣೆ ನಾಮಪತ್ರ ವಾಪಸ್ಸು ಪಡೆಯಲು ಕೊನೆ ದಿನವಾಗಿದ್ದ ಸೋಮವಾರ ನಡೆದಿದೆ ಎನ್ನಲಾಗಿದೆ.
ವರದಿ: ಪ್ರಮೋದ್. ಆರ್. ಚಾಮರಾಜನಗರ