ನವದೆಹಲಿ: ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಭಾರತ ಶತ್ರು ಸೇನೆಗಳ ಹುಟ್ಟಡಗಿಸಲು ಸೂಕ್ತ ತಯಾರಿ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಭಾರತ ಸ್ವದೇಶಿ ನಿರ್ಮಿತ ಆಯುಧಗಳನ್ನೇ ಸೇನೆಗೆ ಸೇರ್ಪಡೆಗೊಳಿಸಲು ಒಂದಾದ ಮೇಲೊಂದು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕೆಲದಿನಗಳ ಹಿಂದೆಯಷ್ಟೇ ಚೀನಾ ಮತ್ತು ಪಾಕ್ ಗಡಿಯಲ್ಲಿ ಭಾರತ ಗಸ್ತು ಹೆಚ್ಚಿಸಲು 156 ಲಘು ಯುದ್ಧ ಹೆಲಿಕಾಪ್ಟರ್ಗಳ ಖರೀದಿಗೆ ಒಪ್ಪಿಗೆ ಸೂಚಿಸಿತ್ತು. ಇದೀಗ ರಕ್ಷಣಾ ಸಚಿವಾಲಯವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜೊತೆಗೆ ಸು-30ಎಂಕೆಐ ವಿಮಾನಗಳಿಗಾಗಿ 240 ಏರೋ ಎಂಜಿನ್ಗಳ ತಯಾರಿಕೆಗಾಗಿ 26,000 ಕೋಟಿ ರೂ.ಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಆತ್ಮನಿರ್ಭರ್ ಭಾರತ್ ಉಪಕ್ರಮಕ್ಕೆ ಉತ್ತೇಜನ ನೀಡುವ ಸಲುವಾಗಿ, ರಕ್ಷಣಾ ಸಚಿವಾಲಯವು 26,000 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ಏರೋ-ಎಂಜಿನ್ಗಳನ್ನು HALನ ಕೊರಾಪುಟ್ ವಿಭಾಗವು ತಯಾರಿಸಲಿದೆ. ಈ ಮೂಲಕ ಹೆಚ್ಎಎಲ್ Su-30MKI ಕಾರ್ಯಾಚರಣೆಯ ಸಾಮರ್ಥ್ಯವನ್ನು ಉಳಿಸಿಕೊಳ್ಳುವಲ್ಲಿ ಭಾರತೀಯ ವಾಯುಪಡೆಗೆ ಸಹಾಯ ಮಾಡುವ ನಿರೀಕ್ಷೆಯಿದೆ. ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಅವರ ಸಮ್ಮುಖದಲ್ಲಿ ಸಚಿವಾಲಯ ಮತ್ತು ಎಚ್ಎಎಲ್ನ ಹಿರಿಯ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.
ಒಪ್ಪಂದದ ಪ್ರಕಾರ, ಹೆಚ್ಎಎಲ್ ವರ್ಷಕ್ಕೆ 30 ಏರೋ-ಎಂಜಿನ್ಗಳನ್ನು ಪೂರೈಸುತ್ತದೆ. ಮುಂದಿನ 8 ವರ್ಷಗಳ ಅವಧಿಯಲ್ಲಿ ಎಲ್ಲಾ 240 ಎಂಜಿನ್ಗಳನ್ನು ಪೂರೈಕೆ ಮಾಡಲಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಯೋಜನೆಯ ಮುಕ್ತಾಯದ ವೇಳೆಗೆ ಒಟ್ಟು ಶೇ.54 ರಷ್ಟಿರುವ ಸ್ವದೇಶಿ ಉತ್ಪನ್ನವನ್ನು ಶೇ.64ಕ್ಕೆ ಹೆಚ್ಚಿಸುವ ಗುರಿಯನ್ನು ಹೆಚ್ಎಎಲ್ ಹೊಂದಿದೆ.