ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದರೂ, ಅಪ್ರಾಪ್ತೆಯ ಮೇಲೆ ಕಿರುಕುಳವಾದ ಬಗ್ಗೆ ಸಮರ್ಥನೀಯ ಸಾಕ್ಷಿಗಳು ಲಭ್ಯವಾಗಿಲ್ಲ ಎನ್ನುವ ಕಾರಣ ನೀಡಿ ಪೋಕ್ಸೋ ಕೇಸ್ ರದ್ದುಗೊಳಿಸಲು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಶಿಫಾರಸು ಮಾಡಿರುವುದಕ್ಕೆ ಕುಸ್ತಿಪಟು ಸಾಕ್ಷಿ ಮಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಸ್ತಿಪಟುಗಳು ಈಗಾಗಲೇ ಬ್ರಿಜ್ ವಿರುದ್ಧ ಎಫ್ಐಆರ್ ದಾಖಲಿಸಲು ವಿಳಂಬ, ಪೊಲೀಸರ ತನಿಖಾ ಪ್ರಕ್ರಿಯೆ ಹಾಗೂ ಅದರಲ್ಲಿ ಬ್ರಿಜ್ಭೂಷಣ್ ಸಿಂಗ್ ಪ್ರಭಾವ ಬೀರುತ್ತಿರುವ ಬಗ್ಗೆ ಹಲವು ಬಾರಿ ಬೇಸರ ಹೊರಹಾಕಿದ್ದರು. ಚಾರ್ಜ್ಶೀಟ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಸಾಕ್ಷಿ, ‘ಬ್ರಿಜ್ಭೂಷಣ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಪೂರಕ ಸಾಕ್ಷ್ಯಾಧಾರ ಇಲ್ಲ ಎಂದು ಪೋಕ್ಸೋ ಕೇಸ್ ಬಿಡಲು ಶಿಫಾರಸು ಮಾಡಿದ್ದಾರೆ. ಅಪ್ರಾಪ್ತೆಯ ತಂದೆಗೆ ಒತ್ತಡ ಇದ್ದಿದ್ದರಿಂದಲೇ ಅವರು ತಮ್ಮ ಹೇಳಿಕೆ ಬದಲಿಸಿದ್ದಾರೆ. ಅವರ ಕುಟುಂಬಕ್ಕೆ ತುಂಬಾ ಒತ್ತಡವಿತ್ತು. ಬ್ರಿಜ್ಭೂಷಣ್ರನ್ನು ಮೊದಲೇ ಬಂಧಿಸಿದ್ದರೆ ಅಪ್ರಾಪ್ತ ಕುಸ್ತಿಪಟು ಹೇಳಿಕೆ ಬದಲಿಸುತ್ತಿರಲಿಲ್ಲ. ಜೊತೆಗೆ ಬ್ರಿಜ್ರಿಂದ ಕಿರುಕುಳಕ್ಕೆ ಒಳಗಾಗಿರುವ ಇನ್ನಷ್ಟು ಕುಸ್ತಿಪಟುಗಳು ದೂರು ನೀಡಲು ಮುಂದೆ ಬರುತ್ತಿದ್ದರು’ ಎಂದಿದ್ದಾರೆ.