ಹಮಾಸ್ನ ಪರಮೋಚ್ಚ ನಾಯಕ ಇಸ್ಮಾಯಿಲ್ ಹನಿಯೆ ಅವರನ್ನು ಇರಾನ್ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮತ್ತು ಬಂಡುಕೋರರ ಗುಂಪು ಖಚಿತಪಡಿಸಿವೆ.
ಪ್ಯಾಲೆಸ್ಟೀನ್ನ ಬಂಡುಕೋರ ಸಂಘಟನೆಯ ರಾಜಕೀಯ ಘಟಕದ ಮುಖ್ಯಸ್ಥ ಹನಿಯೆ ಅವರ ಸಾವಿಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯೇ ಕಾರಣ ಎಂದು ಹಮಾಸ್ ಆರೋಪಿಸಿದೆ.
‘ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಇರಾನ್ನ ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ. ದಾಳಿ ಹೇಗೆ ನಡೆಯಿತು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಕಳೆದ ವರ್ಷ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ 1,200 ಮಂದಿಯನ್ನು ಹತ್ಯೆಗೈದಿದ್ದರು. 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಆ ಬಳಿಕ ಹನಿಯೆ ಮತ್ತು ಇತರ ಹಮಾಸ್ ನಾಯಕರನ್ನು ಮಟ್ಟ ಹಾಕಲು ಇಸ್ರೇಲ್ ನಿರಂತರವಾಗಿ
ಪ್ರಯತ್ನಿಸುತ್ತಿದೆ. ಇಸ್ಮಾಯಿಲ್ ಹನಿಯೆ ಅವರ ಹತ್ಯೆ ಕುರಿತಾಗಿ ಇಸ್ರೇಲ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಾವಿನ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಹಮಾಸ್, ‘ಇರಾನ್ನ ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ಮರಳಿದ ಬಳಿಕ ರಾಜಧಾನಿ ಟೆಹರಾನ್ನಲ್ಲಿರುವ ಅವರ ನಿವಾಸದಲ್ಲಿದ್ದ ಸಂದರ್ಭದಲ್ಲಿ ಹನಿಯೆ ಮತ್ತು ಇತರ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ’ ಎಂದು ತಿಳಿಸಿದೆ.
‘ಹನಿಯೆ ಅವರು ಹುತಾತ್ಮರಾಗಿದ್ದಾರೆ’ ಎಂದೂ ಹಮಾಸ್ ಹೇಳಿಕೆಯಲ್ಲಿ ಘೋಷಣೆ ಮಾಡಿದೆ.
ಕಳೆದ ಏಪ್ರಿಲ್ನಲ್ಲಿ ಗಾಜಾ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹನಿಯೆ ಅವರ ಮೂವರು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳು ಮೃತಪಟ್ಟಿದ್ದರು.
‘ನಮ್ಮ ನಾಡನ್ನು ಸ್ವತಂತ್ರಗೊಳಿಸು ವವರೆಗೂ ಶತ್ರುಗಳೊಂದಿಗೆ ಹೋರಾಡುತ್ತಲೇ ಇರುತ್ತೇವೆ’ ಎಂದು ಹನಿಯೆ ಇತ್ತೀಚೆಗೆ ಹೇಳಿದ್ದರು.