ಕನ್ನಡದ ಖ್ಯಾತ ಹಾಸ್ಯನಟ ಮಿತ್ರ ಇದೀಗ ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಹಾಸ್ಯ ನಟನಾಗಿ ಮಿಂಚಿದ್ದ ಮಿತ್ರ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದರು. ಇದೀಗ ಮತ್ತೊಂದು ಗೆಟಪ್ ನಲ್ಲಿ ಮಿತ್ರ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದ್ದಾರೆ.ಹಾಸ್ಯ ನಟನಾಗಿ, ನಾಯಕನಾಗಿ ಮಿಂಚಿದ್ದ ಮಿತ್ರ ಇದೀಗ ಖಡಕ್ ವಿಲನ್ ಆಗಿ ನೋಡುಗರ ಗಮನ ಸೆಳೆಯಲು ಮುಂದಾಗಿದ್ದಾರೆ.
ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾಕ್ಕಾಗಿ ನಟ ಮಿತ್ರ ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ವಿಲನ್ ಆಗಿ ಮಿತ್ರ ಅವರ ಫೋಟೊಶೂಟ್ ಮಾಡಿಸಲಾಗಿದ್ದು ಗುರುತೇ ಹಿಡಿಯಲಾಗದ ರೀತಿ ಬದಲಾಗಿದ್ದಾರೆ. ತೆಳು, ಬಿಳಿ ಗಡ್ಡಬಿಟ್ಟು ಕೈಯಲ್ಲಿ ಸಿಗಾರ್ ಹಿಡಿದು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಸುಮಾರು ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ-ಕಿರುತೆರೆಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ರೀತಿಯ ಪಾತ್ರಕ್ಕೂ ತಮ್ಮನ್ನ ತಾವು ಒಗ್ಗಿಸಿಕೊಂಡು ಅಭಿನಯಿಸುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈಗ ಮೊದಲ ಬಾರಿಗೆ ವಿಲನ್ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ.
ಪ್ರಜ್ವಲ್ ದೇವರಾಜ್ ಅವ್ರ ‘ಕರಾವಳಿ’ ಸಿನಿಮಾದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ಮಿತ್ರ ನಟಿಸಲಿದ್ದಾರೆ. ಅದಕ್ಕಾಗಿ ಗೆಟಪ್ ಕೂಡ ಬದಲಾವಣೆ ಮಾಡಿದ್ದಾರೆ. ಮಿತ್ರ ಅವರ ನಟನಾ ಪ್ರತಿಭೆಯನ್ನು ಗುರುತಿಸಿ ‘ರಾಗ’ ಹೆಸರಿನ ಸಿನಿಮಾದಲ್ಲಿ ನಾಯಕ ನಟನ ಪಾತ್ರದಲ್ಲಿ ನಟಿಸಿದರು. ಅಂಧ ವ್ಯಕ್ತಿಯ ಆ ಪಾತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಯಿತು. ಆದರೆ ಆ ನಂತರ ಮಿತ್ರಗೆ ನಿರೀಕ್ಷಿಸಿದಷ್ಟು ಅವಕಾಶ ಬರಲಿಲ್ಲ. ಆದರೆ ಈಗ ‘ಕರಾವಳಿ’ ಸಿನಿಮಾ ನಿರ್ದೇಶಕ ಗುರುದತ್ ಗಾಣಿಗ ತಮ್ಮ ಸಿನಿಮಾದಲ್ಲಿ ಪವರ್ಫುಲ್ ಪಾತ್ರವನ್ನು ಮಿತ್ರಗೆ ನೀಡಿದ್ದಾರೆ.
‘ಕರಾವಳಿ’ಯಲ್ಲಿ ವಿಲನ್ ಆಗಿರುವ ಮಿತ್ರ ಒಂದು ಖಡಕ್ ಫೋಟೊಶೂಟ್ ಮಾಡಿಸಿದ್ದಾರೆ. ನಿಜಕ್ಕೂ ಇದು ಹಾಸ್ಯನಟ ಮಿತ್ರ ಅವರೇನಾ ಎಂಬ ಅನುಮಾನ ಮೂಡಿಸುವಂತಿದೆ ವಿಲನ್ ಲುಕ್ ನಲ್ಲಿ ಸಾಕಷ್ಟು ವಿಭಿನ್ನ ಶೇಡ್ ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಈ ಫೋಟೋ ಶೂಟ್ ಮಾಡಿರೋದು ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್. ಮಿತ್ರ ಅವರ ಲುಕ್ ಅನ್ನು ಸ್ಟೈಲಿಷ್ ಮಾಡಿರೋದು ಕಾಲಿವುಡ್ ನ ಸ್ಟೈಲ್ ಮೇಕರ್.
ಮಿತ್ರ ಅವರ ಈ ಲುಕ್ ಬರೀ ಲುಕ್ ಆಗಿಯೇ ಉಳಿದಿಲ್ಲ. ‘ಕರಾವಳಿ’ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಸಹ ಆಯ್ಕೆ ಆಗಿದ್ದಾರಂತೆ.