ಬೀದರ್ (ಏ.25): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾದ್ರಾಪೂರ, ಮೊಗ್ಗಿನತಾಂಡ, ಮದರಗಿ, ಗೋವಿಂದತಾಂಡ, ಗುಡಿತಾಂಡ, ಮುತ್ತಂಗಿ ಸೇರಿದಂತೆ ವಿವಿಧೆಡೆ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು ನಡೆಸಿದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತಯಾಚನೆ ಯಾತ್ರೆ (ಪ್ರಚಾರ ಕಾರ್ಯ) ಭರ್ಜರಿಯಾಗಿ ನಡೆದಿದ್ದು, ಕ್ಷೇತ್ರದ ಜನರು ಪಾಸಿಟಿವ್ ರಸ್ಪಾನ್ಸ್ ತೋರಿದ್ದಾರೆ.
ಕ್ಷೇತ್ರದ ಭಾದ್ರಾಪೂರ, ಮೊಗ್ಗಿನತಾಂಡ, ಮದರಗಿ, ಗೋವಿಂದತಾಂಡ, ಗುಡಿತಾಂಡ, ಮುತ್ತಂಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸೋಮವಾರ ಸಂಜೆ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಗಳ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಗ್ರಾಮಸ್ಥರು ಬಾಜಾ ಭಜಂತ್ರಿಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಈ ವೇಳೆ ಗ್ರಾಮ ಸಂಚಾರ ನಡೆಸಿದ ಶಾಸಕರು, ಕೈಮುಗಿದು ಮತಯಾಚಿಸಿದರು. ಮತಯಾಚನೆಯ ನಡುವೆ ಅವರು, ವಿವಿಧ ಗ್ರಾಮಗಳ ದೇವಸ್ಥಾನ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಮಹಾತ್ಮರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.
ಜೆಡಿಎಸ್ ಸೇರಿದ ಪ್ರಮುಖರು, ಮುಖಂಡರು, ಕಾರ್ಯಕರ್ತರು:
ಚುನಾವಣಾ ಪ್ರಚಾರದ ವೇಳೆಯಲ್ಲಿ ಕ್ಷೇತ್ರದ ಮುತ್ತಂಗಿ ಗ್ರಾಮದಲ್ಲಿ ಕರಕನಳ್ಳಿಯ ಸತ್ಯನಾರಾಯಣರೆಡ್ಡಿ ಎಲೆಚರ್, ಅಶೋಕ್ ರಾಮಾಜಿ, ಗಂಗಾಧರ ಸುರು, ಪಾಂಡುರೆಡ್ಡಿ ತುಮಂಪಳ್ಳಿ, ಶಿವರಾಜ್ ಭೂತಳ್ಳಿ, ಗೌಸ್ ಪಟೇಲ್, ರವಿ ರಾಠೋಡ್, ಏಮನಾಥ ರಾಠೋಡ್, ಇದಲಿಯತಾಂಡದ ಪುನು ನಾಯಕ, ಬಾಬು ನಾಯಕ, ಜೈಸಿಂಗ್ ಸೇರಿದಂತೆ ಅನೇಕರು ಜೆಡಿಎಸ್ ಸೇರ್ಪಡೆಯಾದರು. ಬಿಎಸ್ಪಿ ಪಕ್ಷದ ತಿಪ್ಪಣ್ಣ ವಾಲಿ ಸೇರಿದಂತೆ ಅನೇಕರು ಜೆಡಿಎಸ್ ಸೇರಿದರು. ಇದೇ ವೇಳೆ ವಿವಿಧ ಪಕ್ಷಗಳ ವಿವಿಧ ಗ್ರಾಮಗಳ ಪ್ರಮುಖರು, ಕಾರ್ಯಕರ್ತರು ವಿವಿಧೆಡೆ ಶಾಸಕ ಬಂಡೆಪ್ಪ ಖಾಶೆಂಪುರ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಬಾಬಾ ಸಾಹೇಬರನ್ನು ಸ್ಮರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್:
ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಬಾಬಾ ಸಾಹೇಬರು ನಮಗೆ ಪವಿತ್ರವಾದ ವೋಟಿನ ಹಕ್ಕು ನೀಡಿದ್ದಾರೆ. ನಾವು ಪ್ರಾಮಾಣಿಕ ವ್ಯಕ್ತಿಗಳಿಗೆ ವೋಟ್ ಮಾಡಬೇಕಾಗಿದೆ. ನಮ್ಮ ವೋಟ್ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಸ್ಮರಿಸಿದರು.
ನಾವು ಜನತಾದಳ ಪಕ್ಷದವರು ನಾಡಿನ ಬಡವರ, ರೈತರ, ಶ್ರಮಿಕರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ನಾವು ಕೃಷಿ ಕೆಲಸಕ್ಕಾಗಿ ಸಹಾಯಧನ ನೀಡಲಿದ್ದೇವೆ. ವರ್ಷಕ್ಕೆ ಐದು ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಿದ್ದೇವೆ. ತಾವು ನಮ್ಮನ್ನು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಚುನಾವಣಾ ಪ್ರಚಾರದ ವೇಳೆ ಮನವಿ ಮಾಡಿದರು.