ಮಂಡ್ಯ: ಮಂಡ್ಯದ ನೂತನ ಶಾಸಕ ರವಿಕುಮಾರ್ ಗೌಡ(Ravikumar Gowda) ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ. ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಶಾಸಕರು, ಆಸ್ಪತ್ರೆಯ ಕಾರ್ಯವೈಖರಿ ಯನ್ನು ಪರಿಶೀಲಿಸಿ, ರೋಗಿಗಳಿಂದ ಅಹವಾಲು ಸ್ವೀಕರಿಸಿದರು. ಆಸ್ಪತ್ರೆಯ ವಾರ್ಡ್ ಗಳನ್ನು ವೀಕ್ಷಿಸಿದ ಶಾಸಕರು, ರೋಗಿಗಳಿಗೆ ತೊಂದರೆ ಆಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಖಡಕ್ ಸೂಚನೆ ನೀಡಿದರು.
ಬೆಳಿಗ್ಗೆಯಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿದ ಶಾಸಕ ರವಿಕುಮಾರ್ ಗೌಡ, ಮಂಡ್ಯ ನಗರದ ಪೇಟೆಬೀದಿ ಬಳಿ ಇರುವ ರೈಲ್ವೇ ಗೇಟ್ ಗೆ ನಿರ್ಮಿಸಲು ಉದ್ದೇಶಿಸಿರುವ ಕೆಳಸೇತುವೆ ಬಗ್ಗೆ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಹಾಗೂ ನಗರಸಭೆ ಆಯುಕ್ತರಾದ ಮಂಜುನಾಥ್ ಜೊತೆ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ಷೇತ್ರದ ರಸ್ತೆ ಕಾಮಗಾರಿಗಳ ಬಗ್ಗೆ ಚರ್ಚಿಸಿದರು.
ನಂತರ ಕ್ಷೇತ್ರ ಪ್ರವಾಸದಲ್ಲಿದ್ದ ಶಾಸಕರು ಯಾವುದೇ ಮುನ್ಸೂಚನೆ ನೀಡದೆ ಬಿ.ಹೊಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರು ಹಾಗೂ ಸಿಬ್ಬಂದಿಗಳ ಹಾಜರಾತಿ ಬುಕ್ ಪರಿಶೀಲಿಸಿದ್ರು. ಇದೇ ವೇಳೆ ಆರೋಗ್ಯ ಕಾರ್ಯಕರ್ತೆಯರ ಜೊತೆ ಸಮಾಲೋಚನೆ ನಡಿಸಿದ ಶಾಸಕ ರವಿಕುಮಾರ್ ಗೌಡ, ಆಸ್ಪತ್ರೆಯ ವಾರ್ಡ್ ನ ಸ್ವಚ್ಚತೆ ಪರಿಶೀಲನೆ ನಡೆಸಿದರು. ಇದೇ ಚಿಕಿತ್ಸೆಗಾಗಿ ಆಗಮಿಸಿದ್ದ ರೋಗಿಗಳ ಅಹವಾಲು ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಶಾಸಕ ರವಿಕುಮಾರ್ ಗೌಡ, ಮುಂದಿನ ದಿನಗಳಲ್ಲಿ ಇನ್ನಿತರ ಆರೋಗ್ಯ ಕೇಂದ್ರಗಳು , ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಜನ ಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.