ನವದೆಹಲಿ: ಭಾರತದಲ್ಲಿ ಯುಗಾದಿ (Ugadi) ಎಂದರೆ ಹೊಸ ಯುಗದ ಆರಂಭ ಎಂದರ್ಥ. ಇಂದು (ಮಾ.22) ಭಾರತದೆಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ-ಮನಗಳಲ್ಲಿ ಸಂಭ್ರಮವೋ ಸಂಭ್ರಮ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಾಡಿನ ಜನತೆಗೆ ಕನ್ನಡದಲ್ಲೇ ಟ್ವೀಟ್ (Tweet) ಮಾಡಿ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದೇಶದೆಲ್ಲೆಡೆ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ. ಆಂಧ್ರಪ್ರದೇಶ (Andhra Pradesh) ಮತ್ತು ಕರ್ನಾಟಕದ (Karnataka) ಜನರು ಯುಗಾದಿಯನ್ನು ಹೊಸ ವರ್ಷವೆಂದು ಪರಿಗಣಿಸುತ್ತಾರೆ. ಈ ದಿನ ಬೇವು-ಬೆಲ್ಲವನ್ನು ಎಲ್ಲರಿಗೂ ಹಂಚಲಾಗುತ್ತದೆ. ಇದು ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟ ಹಂತವನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುತ್ತದೆ. ಅಲ್ಲದೇ ವಸಂತ ಋತುವನ್ನು ಸ್ವಾಗತಿಸುವ ದಿನವೂ ಇದಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ನಾಯಕರು, ಸಿನಿ ತಾರೆಯರು ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿ ಸಂದೇಶ ಹಂಚಿಕೊಂಡಿದ್ದಾರೆ.