ಅಹ್ಮದಾಬಾದ್: ದೇಶವೇ ಎದುರು ನೋಡುತ್ತಿರುವ ವಿಶ್ವಕಪ್ ಮಹಾಸಮರಕ್ಕೆ ಇನ್ನೊಂದು ದಿನ ಬಾಕಿಯಿದೆ. ಕೋಟ್ಯಂತರ ಅಭಿಮಾನಿಗಳು ಫೈನಲ್ (World Cup Final) ಪಂದ್ಯ ವೀಕ್ಷಣೆ ಮಾಡಲು ಕಾದು ಕುಳಿತಿದ್ದಾರೆ. ಲೀಗ್ ಸುತ್ತಿನಿಂದಲೂ ಒಂದೇ ಒಂದು ಪಂದ್ಯ ಸೋಲದ ಭಾರತ ಸರಿಸಾಟಿಯೇ ಇಲ್ಲದಂತೆ ಮುನ್ನುಗ್ಗುತ್ತಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ನವೆಂಬರ್ 19 ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ಪಂದ್ಯ ಆರಂಭವಾಗಲಿದ್ದು, 20 ವರ್ಷಗಳ ಬಳಿಕ ಭಾರತ ಕಾಂಗರೂ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ (Team India) ಸ್ಫೂರ್ತಿ ತುಂಬಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹಲವು ನೃತ್ಯಪಟುಗಳು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬೀಡುಬಿಟ್ಟಿದ್ದು, ನೃತ್ಯ ಅಭ್ಯಾಸ ನಡೆಸುತ್ತಿದ್ದಾರೆ.
ಟೀಂ ಇಂಡಿಯಾವನ್ನು ಮತ್ತಷ್ಟು ಹುರಿದುಂಬಿಸಲು ʻಜೀತೇಗ ಇಂಡಿಯಾ ಜೀತೇಗʼ (Jeetega, India Jeetega) ವಿಶೇಷ ಗೀತೆಯೊಂದಿಗೆ ನೃತ್ಯ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಅಲ್ಲದೇ ಬಾಲಿವುಡ್ ತಾರೆಯರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ಫೈನಲ್ ಸಮಾರಂಭದಲ್ಲಿ ಭಾರತೀಯ ವಾಯುಪಡೆಯಿಂದ ವಿಶೇಷ ಏರ್ಶೋ ಪ್ರದರ್ಶನ ನಡೆಯಲಿದೆ. ಇದು ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಲಿದೆ. ಇಂದು ಮೊದಲ ಹಂತದ ರಿಹರ್ಸಲ್ ಕೂಡ ನಡೆದಿದೆ