ಕಲಬುರಗಿ: ಪ್ರಧಾನಿ ಮೋದಿಯನ್ನು ವಿಷದ ಹಾವು ಎಂದು ಹೇಳುವ ಮೂಲಕ ತೀವ್ರ ವಿವಾದಕ್ಕೊಳಗಾಗಿದ್ದ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಮೋದಿ ಕ್ರೈ ಬೇಬಿ ಎಂದು ವ್ಯಂಗ್ಯವಾಡಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಅಳುತ್ತಲೇ ಇರುವುದು ಪ್ರಧಾನಿ ಮೋದಿ ಅವರಿಗೆ ರೂಢಿಯಾಗಿಬಿಟ್ಟಿದೆ. ಅವರೊಬ್ಬ ಕ್ರೈ ಬೇಬಿ ಎಂದು ಲೇವಡಿ ಮಾಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು 91 ಬಾರಿ ನನ್ನನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ ಎನ್ನುವ ಮೋದಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಡಿರುವ ಹಗುರವಾದ ಮಾತುಗಳನ್ನು ಮರೆತಿದ್ದಾರೆ ಎಂದು ಆರೋಪಿಸಿದರು.
ಸೋನಿಯಾ ಗಾಂಧಿ ಅವರನ್ನು ವಿಡೋ (ವಿಧವೆ), ಇಟಲಿ ಗರ್ಲ್ ಎಂದಿದ್ದರು. ರಾಹುಲ್ ಗಾಂಧಿ ಒಬ್ಬ ಹೈಬ್ರಿಡ್ ಎಂದಿದ್ದರು. ಇಷ್ಟೆಲ್ಲಾ ಹಗುರವಾದ ಮಾತುಗಳನ್ನು ನಮ್ಮ ಪಕ್ಷದ ಹೈಕಮಾಂಡ್ ವಿರುದ್ಧ ಆಡಿದ್ದರೂ ನಾವ್ಯಾರೂ ಮೋದಿ ಅವರಂತೆ ಅಳುತ್ತಾ ಕುಳಿತಿಲ್ಲ. ಇದೊಂದು ವಾರ್ ಅನ್ನೋದು ನಮಗೆ ಗೊತ್ತು. ಬರೀ ಅಳುತ್ತಾ ಕುಳಿತುಕೊಂಡರೆ ಆಗಲ್ಲ ಎಂದು ಅವರು ಕುಟುಕಿದರು.
ತಾವೊಬ್ಬ ಹಿಂದುಳಿದ ವರ್ಗದ ವ್ಯಕ್ತಿ ಆಗಿರುವುದರಿಂದ ತಮ್ಮ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಮೋದಿ ಪದೇಪದೆ ಉಲ್ಲೇಖಿಸುತ್ತಾರೆ. ಆದರೆ ಮೋದಿಯವರು ಒಂದು ಅಂಶವನ್ನು ನೆನಪಿಡಬೇಕು, ನಾನು ದಲಿತ. ಮೋದಿಗಿಂತಲೂ ಕೆಳಗೆ ಇದ್ದೇನೆ. ಮೊದಲು ನನ್ನ ತಲೆಯ ಮೇಲೆ ಕಾಲಿಟ್ಟ ಮೇಲೆಯೇ ನಿಮ್ಮ ಕಡೆಗೆ ಬರುತ್ತಾರೆ’ ಎಂದು ಸೂಚ್ಯವಾಗಿ ನುಡಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳ ಸಂಘಟನೆ ನಿಷೇಧಿಸುವ ಅಂಶದ ಕುರಿತು ಪ್ರಸ್ತಾಪಿಸಿದ ಅವರು, ಪ್ರಣಾಳಿಕೆ ಸಮಿತಿಯ ಅಧ್ಯಕ್ಷರು ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಕೆಲವರು ರಾತ್ರಿಯಲ್ಲಿ ಮಟನ್ ತಿಂದು ಹಗಲು ಹೊತ್ತಲ್ಲಿ ನಾನ್ ವೆಜ್ ತಿನ್ನುವವರನ್ನು ಬೈಯ್ದಾಡಿಕೊಂಡು ಓಡಾಡುತ್ತಾರೆ. ಒಟ್ಟಾರೆ, ಜನರ ಮಧ್ಯೆ ಜಗಳ ಹಚ್ಚಿ ಓಟು ಪಡೆಯುವ ಗಿಮಿಕ್ ಒಳ್ಳೆಯದಲ್ಲ ಎಂದು ಖರ್ಗೆ ಕಿವಿಮಾತು ಹೇಳಿದರು.