ಚಾಮರಾಜನಗರ: ಬಂಡೀಪುರ ಸಫಾರಿ ಬಳಿಕ ಪ್ರಧಾನಿ ಮೋದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ಖ್ಯಾತಿಯ ಬೊಮ್ಮನ್- ಬೆಳ್ಳಿ (Bomman- Belly) ದಂಪತಿ ಹಾಗೂ ಕೆಲ ಮಾವುತರ ಕಷ್ಟ ಸುಖ ಆಲಿಸಿದ್ದರು. ಅಗತ್ಯ ನೆರವಿನ ಭರವಸೆಯನ್ನೂ ನೀಡಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ (Congress), ಮೋದಿ (Narendra Modi) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಿದೆ. ಮಾವುತರಿಗೆ ಮೋದಿ ಒಂದು ಲಕ್ಷ ರೂ ಹಣ ಕೊಟ್ಟಿದ್ದಾರೆಂದು ದೂರಿದೆ. ಆದರೆ ಈ ಆರೋಪವನ್ನು ಅಲ್ಲಗಳೆಯುವ ಮೂಲಕ ಬೊಮ್ಮನ್ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಬೊಮ್ಮನ್ ಹೇಳಿದ್ದೇನು..?: ಕಾಂಗ್ರೆಸ್ ಆರೋಪದ ಕುರಿತು ತಮಿಳುನಾಡಿನ ಮುದುಮಲೈನ ತೆಪ್ಪಕಾಡು ಆನೆ ಶಿಬಿರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬೊಮ್ಮನ್, ಪ್ರಧಾನಿ ಮೋದಿ ನಮಗೆ ಭರವಸೆ ಕೊಟ್ಟಿಲ್ಲ, ಪ್ರೀತಿ ಕೊಟ್ಟಿದ್ದಾರೆ. ದೆಹಲಿಗೆ ಬರಲೂ ಹೇಳಿದ್ದಾರೆ. ನಮಗೆ ಹಣ ಕೊಟ್ಟಿದ್ದು ಮೊದಿಯಲ್ಲ, ತಮಿಳುನಾಡು ಸಿಎಂ ಸ್ಟಾಲಿನ್. ಮೋದಿ ಬಂದಿದ್ದು ತುಂಬಾ ಖುಷಿಯಿದೆ. ಡಾಕ್ಯುಮೆಂಟ್ ನಲ್ಲಿರೋ ಆನೆಗೆ ಕಬ್ಬು ಕೊಟ್ಟರು. ಬೇರೆ ಆನೆಗಳಿಗೂ ಕಬ್ಬು ಕೊಟ್ಟಿದ್ದಾರೆ. ಅವರು ಭೇಟಿ ಕೊಟ್ಟಿದ್ದು ಮುದುಮಲೈ ಅರಣ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಸ್ಟಾಲಿನ್ (Stalin) ಚೆನೈನಲ್ಲಿ ಕಾರ್ಯಕ್ರಮ ಮಾಡಿ ಆಸ್ಕರ್ ಅವಾರ್ಡ್ ಬಂದಿದ್ದಕ್ಕೆ ಒಂದು ಲಕ್ಷ ಹಣ ಕೊಟ್ಟಿದ್ದಾರೆ. ಕ್ಯಾಂಪ್ನಲ್ಲಿರುವ ಮಾವುತ, ಕಾವಾಡಿಗಳಿಗೂ ಹಣ ಕೊಟ್ಟಿದ್ದಾರೆ. ಮೋದಿ ಬಂದ ವೇಳೆ ಯಾವುದೇ ಗಿಫ್ಟ್, ಹಣ ಕೊಟ್ಟಿಲ್ಲ.
ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಬಂದಾಗ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ತಮ್ಮನ್ನು ಸನ್ಮಾನಿಸಿದ್ದರು. ಈ ಸಂದರ್ಭದಲ್ಲಿ ಒಂದು ಲಕ್ಷ ರೂ. ಹಣವನ್ನೂ ಕೊಟ್ಟಿದ್ದರು. ಈ ವಿಚಾರವನ್ನು ನಾನು ಎಲ್ಲರೊಂದಿಗೂ ಹಂಚಿಕೊಂಡಿದ್ದೆ. ಆದರೆ ಅದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಮೋದಿ ಅವರು ಹಣ ಕೊಟ್ಟಿಲ್ಲ. ಪ್ರೀತಿ ಕೊಟ್ಟು, ಹತ್ತಿರದಲ್ಲಿ ಕೂರಿಸಿಕೊಂಡು ಮಾತಾಡಿದ್ದಾರೆ. ಮೋದಿ ಬಳಿ ನಮ್ಮ ಸಮಸ್ಯೆ ಹೇಳಿಕೊಂಡಿದ್ವಿ. ಅದನ್ನು ಇಲ್ಲಿನ ಅಧಿಕಾರಿಗಳು ಕೂಡ ಜೊತೆಗೂಡಿ ಬಗೆಹರಿಸ್ತೇವೆ ಅಂದಿದ್ದಾರೆಂದು ಬೊಮ್ಮನ್ ಸ್ಪಷ್ಟಪಡಿಸಿದ್ದಾರೆ.