ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಗಾಂಧಿ ಜಯಂತಿಯ (Gandhi Jayanti) ಪೂರ್ವ ದಿನವಾದ ಇಂದು ಕಸ ಗುಡಿಸಿ ಸ್ವಚ್ಛಗೊಳಿಸಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಗಾಂಧಿಜಿಯವರಿಗೆ ಸ್ವಚ್ಛಾಂಜಲಿ ಅರ್ಪಿಸಿದ್ದಾರೆ. ಈ ವೇಳೆ ಮೋದಿಯವರು ಫಿಟ್ನೆಸ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅಂಕಿತ್ ಬೈಯನ್ಪುರಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಅಭಿಯಾನಕ್ಕೆ ಮೋದಿ ಹಾಗೂ ಅಂಕಿತ್ ಇಬ್ಬರು ಕಸ ಗುಡಿಸುವ ಮೂಲಕ ವಿಶೇಷವಾಗಿ ಚಾಲನೆ ನೀಡಿದ್ದಾರೆ. ಬಳಿಕ ಮೋದಿಯವರು ಫಿಟ್ನೆಸ್ ಮತ್ತು ಆರೋಗ್ಯದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಈ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರದ ಸ್ವಚ್ಛತೆಗೆ ಆದ್ಯತೆ ನೀಡಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ.
ಸ್ವಚ್ಛತೆಯ ಹೊರತಾಗಿ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆಯೂ ಚರ್ಚಿಸಿದ್ದೇವೆ. ಈ ಮೂಲಕ ಸ್ವಚ್ಛ ಮತ್ತು ಸ್ವಸ್ತ್ ಭಾರತ ಎಂಬ ಪರಿಕಲ್ಪನೆಯನ್ನು ಬಿತ್ತಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇತ್ತೀಚಿನ `ಮನ್ ಕಿ ಬಾತ್’ನಲ್ಲಿ ಮೋದಿಯವರು ಅ.1 ರಂದು ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ ಎಂಬ ಘೋಷಣೆಯೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಕರೆಕೊಟ್ಟಿದ್ದರು. ಇದು ಮಹಾತ್ಮ ಗಾಂಧಿಯವರಿಗೆ `ಸ್ವಚ್ಛಾಂಜಲಿ’ ಎಂದು ಅವರು ಹೇಳಿದ್ದರು.