ನವದೆಹಲಿ: ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಜು.14ರಂದು ನಡೆಯಲಿರುವ “ಬಾಸ್ಟಿಲ್ ಡೇ ಪರೇಡ್”ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮೋದಿ ಜೊತೆಗೆ ಭಾರತೀಯ ಸೇನಾ ಪಡೆಗಳ ತಂಡವೊಂದು ಈ ಪರೇಡ್ನಲ್ಲಿ ಭಾಗವಹಿಸಲಿದೆ. ಭಾರತ-ಫ್ರಾನ್ಸ್ ರಾಜತಾಂತ್ರಿಕ ಸಂಬಂಧಕ್ಕೆ 25 ವರ್ಷ ಸಂದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷರ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಪ್ರಧಾನಿ ಮೋದಿ ಅವರ ಫ್ರಾನ್ಸ್ ಭೇಟಿಯಿಂದ ಕೈಗಾರಿಕೆಗಳು ಒಳಗೊಂಡಂತೆ ಕಾರ್ಯತಂತ್ರ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರದಲ್ಲಿ ಮಹತ್ವಾಕಾಂಕ್ಷೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಭಾರತ-ಫ್ರಾನ್ಸ್ ರಾಜತಾಂತ್ರಿಕ ಸಂಬಂಧವು ಮುಂದಿನ ಹಂತಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.