ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ವಸಂತಪುರದಲ್ಲಿ ಮಾತನಾಡಿದ ಅವರು, ಮೋದಿ ಮತ್ತು ಅಮಿತ್ ಶಾ ಅವರು, ಪ್ರತಿವಾರ, ಮೂರು ದಿನಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್ ಲೂಟಿ ಮಾಡಿ ಕೇಂದ್ರದ ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ನೀಡುವ ಎಟಿಎಂ ಕೇಂದ್ರವಾಗಿ ಕರ್ನಾಟಕ ಮಾರ್ಪಟ್ಟಿದೆ’ ಎಂದರು. ಬೆಂಗಳೂರು ನಗರಕ್ಕೆ ಕಳಂಕತರುವ ಶಾಸಕರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರು ಮೊದಲಿಗರು.
ಹದಿನೈದು ವರ್ಷದಲ್ಲಿ ಸಾವಿರಾರು ಕೋಟಿ ಅನುದಾನ ಬಿಡುಗಡೆಯಾಗಿದ್ದರೂ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ’ ಎಂದು ಆರೋಪಿಸಿದರು. ನಯವಾಗಿ ಅಣ್ಣ, ಸಾಹುಕಾರ ಎಂದು ಕರೆದು ಮತದಾರರನ್ನು ವಂಚಿಸುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅನ್ಯಾಯ, ಅಕ್ರಮ ಮೂಲಕ ಹಣ ಸಂಪಾದನೆ ಮಾಡಿದ್ದಾರೆ. ಪೊಲೀಸ್, ಬಿಬಿಎಂಪಿ, ಕಂದಾಯ ಅಧಿಕಾರಿಗಳ ಮೂಲಕ ಕಮಿಷನ್ ಪಡೆದಿದ್ದಾರೆ. ಸಾರ್ವಜನಿಕರು ಈ ಅನ್ಯಾಯವನ್ನು ಪ್ರಶ್ನಿಸಿದರೆ ಪೊಲೀಸ್ ಮತ್ತು ಬೆಂಬಲಿಗರ ಮೂಲಕ ಹೆದರಿಸುವ ಶಾಸಕರನ್ನು ಈ ಬಾರಿ ಸೋಲಿಸಬೇಕು. ಈಗ ಮಾಡಿರುವ ಅನ್ಯಾಯ, ಅಕ್ರಮ ಸಾಕು’ ಎಂದು ಕಿಡಿಕಾಡಿದರು.